
ಮೈಸೂರು ; ಶೋಷಿತ ದಲಿತ ಹಾಗೂ ಹಿಂದುಳಿದ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ನಿಜವಾದ ಸಮಾನತೆ ಸಾಧ್ಯ ಎಂದು ಮಾನ್ಯ ನಗರಾಭಿವೃದ್ಧಿ ಸಚಿವರು ಮತ್ತು ಮೈಸೂರು ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದ ಬಾಬು ಜಗಜೀವನ್ ರಾಂ ಸಭಾಂಗಣದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗದ ನಿರುದ್ಯೋಗ ಯುವತಿಯರಿಗೆ ಉಚಿತ ಟೈಲರಿಂಗ್ ಯಂತ್ರೋಪಕರಣ ಮತ್ತು ತರಬೇತಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ಬೋವಿ ಸೇರಿದಂತೆ ಶೋಷಿತ ಸಮುದಾಯಗಳನ್ನು ಗುರುತಿಸಿ, ಕೆಆರ್ಎಸ್ ಅಣೆಕಟ್ಟು ನಿರ್ಮಾಣ ಸೇರಿದಂತೆ ಸರ್ಕಾರದ ವಿವಿಧ ಕಾಮಗಾರಿಗಳಲ್ಲಿ ಅವಕಾಶ ನೀಡಿ ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಕ್ರಿಯೆಗೆ ನಾಂದಿ ಹಾಡಲಾಗಿತ್ತು ಎಂದರು. ಸಮಾಜದಲ್ಲಿ ಹುಟ್ಟಿನಿಂದಲೇ ವೃತ್ತಿ ಮತ್ತು ಸ್ಥಾನಮಾನಗಳನ್ನು ನಿರ್ಧರಿಸುವ ದೋಷಪೂರಿತ ಜಾತಿ ವ್ಯವಸ್ಥೆ ಇದೆ. ಇದರಿಂದಾಗಿ ಶ್ರಮಿಕರು ಮತ್ತು ದಲಿತರು ಶತಮಾನಗಳಿಂದ ವಿದ್ಯೆ, ಅಧಿಕಾರ ಹಾಗೂ ಸಂಪತ್ತಿನಿAದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಸಂವಿಧಾನದ ಮೂಲಕ ಮೀಸಲಾತಿ ಹಾಗೂ ವಿಶೇಷ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಎಸ್ಸಿ,ಎಸ್ಟಿ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಶೇ. 24.10ರಷ್ಟು ಅನುದಾನವನ್ನು ಕಡ್ಡಾಯಗೊಳಿಸಿ ಕಾನೂನು ತರಲಾಗಿದೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ 1 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಎಸ್ಸಿ,ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ.ಕೇವಲ ಮೀಸಲಾತಿ ಅಥವಾ ಸರ್ಕಾರದ ಸೌಲಭ್ಯಗಳಷ್ಟೇ ಸಾಲದು. ಮಹಿಳೆಯರು ಮತ್ತು ಯುವಕರು ಸ್ವಯಂ ಉದ್ಯೋಗ, ಸಣ್ಣ ಪ್ರಮಾಣದ ಜವಳಿ ಉದ್ಯಮ, ಹೈನುಗಾರಿಕೆ ಹಾಗೂ ಉದ್ಯಮಶೀಲತೆಯತ್ತ ಗಮನಹರಿಸಿ ಸ್ವಾವಲಂಬಿಗಳಾಗಬೇಕು ಎಂದರು.
ಶಾಸಕ ಕೆ ಹರೀಶ್ಗೌಡ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು 2016-17ರಲ್ಲಿ ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು. ಪ್ರತಿಯೊಂದು ಸಮಾಜದ ಕಷ್ಟ-ಸುಖಗಳನ್ನು ಅರಿತು, ಎಲ್ಲರಿಗೂ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ಈ ನಿಗಮವನ್ನು ರೂಪಿಸಿದ ಏಕೈಕ ನಾಯಕ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ಮಾತನಾಡಿ, ಪೋಷಕರು ತಮ್ಮ ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಮಾಜದ ಪ್ರತಿಯೊಬ್ಬ ಮಗುವೂ ಐಎಎಸ್ ಮತ್ತು ಐಪಿಎಸ್ ಅಧಿಕಾರಿಯಾಗುವಂತಹ ಉನ್ನತ ಕನಸು ಕಾಣಬೇಕು ಮತ್ತು ಅದನ್ನು ನನಸು ಮಾಡಲು ಶ್ರಮಿಸಬೇಕು. ಸರ್ಕಾರ ನೀಡುವ ಉದ್ಯೋಗ ಹಾಗೂ ತರಬೇತಿ ಸೌಲಭ್ಯಗಳನ್ನು ಸಾರ್ವಜನಿಕರು ಸಮರ್ಥವಾಗಿ ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿದ 5 ಪ್ರಮುಖ ಗ್ಯಾರಂಟಿ ಯೋಜನೆಗಳ ಜೊತೆಗೆ, ಭೋವಿ ಅಭಿವೃದ್ಧಿ ನಿಗಮದ ವತಿಯಿಂದ 6 ಪ್ರಮುಖ ಕಲ್ಯಾಣ ಯೋಜನೆಗಳನ್ನು ಸೇರಿಸಿ ಒಟ್ಟು 11 ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎನ್ ರಂಗಸ್ವಾಮಿ, ಕರ್ನಾಟಕ ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರನಾಯಕ್ ಯು , ಕಾಡ ಅಧ್ಯಕ್ಷರಾದ ಮುನಿಸ್ವಾಮಿ, ಕರ್ನಾಟಕ ಭೂಮಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್, ಬೋವಿ ನಿಗಮದ ಜಿಲ್ಲಾಧ್ಯಕ್ಷ ಜಯಕುಮಾರ್ ಹಾಗೂ ಮಾಜಿ ಅಧ್ಯಕ್ಷ ನಾಗರಾಜು, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜು ಮತ್ತಿತರರು ಉಪಸ್ಥಿರಿದರು.