
ಮೈಸೂರು: ಈ ಬಾರಿಯ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಹಾಗೂ ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಆಯೋಜಿಸುವುದು ಖಚಿತವಾಗಿದೆ.
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸರ್ಕಾರ ನಿರ್ಧಾರ ಮಾಡಿ ಜಾಗ ಗುರುತಿಸಿ ಪರಿಶೀಲನೆಯೂ ನಡೆಸಿತ್ತು. ಆದರೆ ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಆದರೂ ಸಹ ಕಂಬಳ ನಡೆಸಲು ಮುಂದಾಗಿರುವ ಸರ್ಕಾರ ಇದೀಗ ಇದಕ್ಕೆ ಉಪಸಮಿತಿಯನ್ನ ರಚನೆ ಮಾಡಿದ್ದು ಈ ಬಾರಿ ಕಂಬಳ ನಡೆಯುವುದು ಸಂಪೂರ್ಣವಾಗಿ ಖಚಿತವಾಗಿದೆ.
ಹೌದು. ನಾಡಹಬ್ಬ ಮೈಸೂರು ದಸರಾ ಆಚರಣೆಗಾಗಿ ರಾಜ್ಯ ಸರ್ಕಾರ ವಿವಿಧ ಉಪಸಮಿತಿಗಳನ್ನ ರಚನೆ ಮಾಡಿದ್ದು, ಇದರಲ್ಲಿ ಕಂಬಳ ಉಪಸಮಿತಿಯೂ ಇದೆ. ಕಂಬಳ ಉಪಸಮಿತಿಯ ಉಪ ವಿಶೇಷಾಧಿಕಾರಿಯಾಗಿ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಉಪ ಅರಣ್ಯಾಧಿಕಾರಿ ಪರಮೇಶ, ಕಾರ್ಯದರ್ಶಿಗಳಾಗಿ ಪದ್ಮನಾಭ, ಮೈತ್ರಿ ಅವರನ್ನ ನೇಮಿಸಲಾಗಿದೆ. ಕಂಬಳ ನಡೆಸುವುದಕ್ಕಾಗಿ ಸಾತಗಳ್ಳಿಯಲ್ಲಿ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ.
ಸ್ವಾಗತ, ಅಮಂತ್ರಣ ಮತ್ತು ಸ್ಥಳಾವಕಾಶ, ಬಂದೋಬಸ್ತ್, ಪಂಜಿನ ಕವಾಯತು, ಮೆರವಣಿಗೆ ಮತ್ತು ಸ್ತಬ್ದಚಿತ್ರ, ರೈತ ದಸರಾ, ಸಾಮಸ್ಕöÈತಿಕ ದಸರಾ, ಲಲಿತ ಕಲೆ ಮತ್ತು ಕರಕುಶಲ ಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವ ಸಂಭ್ರಮ, ಯುವದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಆಹಾರ ಮೇಳ, ಕಂಬಳ, ಕುಸ್ತಿ, ಗಜಪಯಣ , ಕ್ರೀಡೆಗೆ ಉಪಸಮಿತಿಗಳನ್ನ ರಚಿಸಲಾಗಿದೆ.