
ಮೈಸೂರು; ಸೊಳ್ಳೆ ನಿಯಂತ್ರಣವೇ ರೋಗ ನಿಯಂತ್ರಣ – ಸ್ವಚ್ಛ ಪರಿಸರವೇ ಆರೋಗ್ಯದ ರಕ್ಷಾಕವಚವಾಗಿದೆ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಹೇಳಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ವತಿಯಿಂದ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು,
ಸೊಳ್ಳೆಗಳಿಂದ ಹರಡುವ ರೋಗಗಳು ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲಾಗಿದ್ದು, ಅವುಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಮತ್ತು ಜನಜಾಗೃತಿಯೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ತಿಳಿಸಿದರು. ಡೆಂಗ್ಯೂ, ಮಲೇರಿಯಾ, ಚಿಕೂನ್ಗುನ್ಯಾ ಮುಂತಾದ ರೋಗಗಳು ಸೊಳ್ಳೆಗಳ ಮೂಲಕ ವೇಗವಾಗಿ ಹರಡಬಹುದಾಗಿರುವುದರಿಂದ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಮನೆ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ನಿರ್ಮೂಲನೆ ಮಾಡುವುದು, ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಅನುಸರಿಸುವುದು ಮತ್ತು ರೋಗದ ಲಕ್ಷಣಗಳು ಕಂಡುಬAದ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸೀಮಿತವಾಗದೆ, ಸೊಳ್ಳೆಜನ್ಯ ರೋಗಗಳ ಕುರಿತು ಪಡೆದ ಜ್ಞಾನವನ್ನು ಕುಟುಂಬ ಮತ್ತು ಸಮಾಜದಲ್ಲಿ ಹಂಚಿಕೊಳ್ಳುವ ಮೂಲಕ ಆರೋಗ್ಯ ಜಾಗೃತಿಯ ರಾಯಭಾರಿಗಳಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಸೌಜನ್ಯ ಕೆ. ಎನ್. ಮಾತನಾಡಿ, ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಮಲೇರಿಯಾ, ಚಿಕೂನುಗುನ್ಯಾ, ಜಪಾನೀಸ್ ಎನ್ಸೆಫಲೈಟಿಸ್ ಸೇರಿದಂತೆ ವಿವಿಧ ರೋಗಗಳ ಹರಡುವಿಕೆ, ಲಕ್ಷಣಗಳು, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಭಿಜಿತ್ ಎಂ. ಸಿಂಗ್ ಹಾಗೂ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಜಾಗೃತಿ ಪೋಸ್ಟರ್ಗಳನ್ನು ಪ್ರದರ್ಶಿಸಿದರು. ಪೋಸ್ಟರ್ಗಳ ಮೂಲಕ ಡೆಂಗ್ಯೂ, ಮಲೇರಿಯಾ, ಚಿಕೂನ್ಗುನ್ಯಾ ಸೇರಿದಂತೆ ವಿವಿಧ ರೋಗಗಳ ಲಕ್ಷಣಗಳು, ಹರಡುವ ವಿಧಾನಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.