
ಮೈಸೂರು; ಜ್ಞಾನದಾಹವನ್ನು ಸಂಸ್ಕೃತ ಭಾಷೆ ನೀಗಿಸಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿ ಶಿವರಾಜು ಹೇಳಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಸ್ಕೃತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಜೆಎಸ್ಎಸ್ ಸಂಸ್ಥೆ ಸಂಶೋಧನಾ ಕೇಂದ್ರ ತೆರೆದಿರುವುದು ಹೆಮ್ಮೆಯ ಸಂಗತಿ. ಸಂಸ್ಕೃತ ಗ್ರಂಥಭAಡಾರವನ್ನು ಸಂರಕ್ಷಿಸುವ ಕಾರ್ಯವನ್ನು ಜೆಎಸ್ಎಸ್ ಸಂಸ್ಥೆ ಕೈಗೊಂಡಿರುವುದು ಅಭಿಮಾನದ ಸಂಗತಿ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ರಾಮಚಂದ್ರ ಜಿ ಭಟ್, ಸಂಸ್ಕೃತ ವಿಶ್ವ ಭಾ಼ಷೆಯಾಗಿದ್ದು, ಸಮಸ್ತ ಮಾನವ ಕುಲದ ಮಾತೃ ಭಾಷೆಯಾಗಿದೆ. ಜಗತ್ತಿನ ಭಾಷೆಗಳಲ್ಲಿ ಸಂಸ್ಕೃತ ಅಗ್ರಮಾನ್ಯತೆಯನ್ನು ಪಡೆದಿದೆ. ಸಂಸ್ಕೃತ ಸಂಸ್ಕಾರಗುಣಸAಹಿತೆ ಮತ್ತು ಜ್ಞಾನಭಂಡಾರದ ಸತ್ಯವನ್ನು ಹೊಂದಿದೆ. ಈ ಭಾಷೆ ಕಲಿಯುವುದರಿಂದ ಸತ್ಯದ ದರ್ಶನವಾಗುತ್ತದೆ ಎಂದು ತಿಳಿಸಿದರು.
ಆಯುರ್ವೇದ ವೈದ್ಯ ಡಾ. ಬಿ ನಂಜುAಡಸ್ವಾಮಿ ಮಾತನಾಡಿ, ಮೈಸೂರು ಸಂಸ್ಥಾನ ಸಂಸ್ಕೃತ ಭಾಷೆ ಮತ್ತು ಸಾಹಿತ್ಯಕ್ಕೆ ಗುರುತರವಾದ ಕೊಡುಗೆಯನ್ನು ನೀಡಿದೆ ಎಂದು ತಿಳಿಸಿದರು. ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ. ಶಿವಕುಮಾರಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸುತ್ತೂರು ಮಠವು ಸಂಸ್ಕೃತ ಭಾಷೆ ಮತ್ತು ಸಾಹಿತ್ಯಕ್ಕೆ ತನ್ನದೆ ಕೊಡುಗೆಯನ್ನು ನೀಡಿರುವುದನ್ನು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷೀಯ ನುಡಿಗಳನ್ನಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್ ಅಹಲ್ಯಾ, ಶ್ರಾವಣಮಾಸ ಶ್ರೇಷ್ಠವಾಗಿದ್ದು ಈ ಮಾಸದಲ್ಲಿ ಸಂಸ್ಕೃತೋತ್ಸವ ಎಲ್ಲೆಡೆ ಆಚರಿಸಲಾಗುತ್ತಿದೆ. ವರ್ಣಮಾಲೆಯ ಉಚ್ಛಾರಣೆ ಮತ್ತು ಸಂಸ್ಕೃತ ಭಾಷೆಯ ವೈಜ್ಞಾನಿಕ ಮಹತ್ವದ ಜೊತೆಗೆ ಸಂಸ್ಕೃತ ಭಾಷೆ ಶ್ರೇಷ್ಠ ಮಟ್ಟದ ಸಂಸ್ಕಾರವನ್ನು ಕಲಿಸುತ್ತದೆ. ಸಂಸ್ಕೃತ ಜ್ಞಾನ ಭಾಷೆಯು ಹೌದು ಅನ್ನ ಭಾಷೆಯು ಹೌದು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಜಗತ್ತಿನ ಭಾಷೆಗಳಲ್ಲಿ ಸಂಸ್ಕೃತ ಶ್ರೇಷ್ಠವಾಗಿದ್ದು ಭಾರತೀಯ ಭಾಷೆಗಳ ಜೊತೆಗೆ ಯೂರೋಪಿಯನ್ ಭಾಷೆಗಳಿಗೂ ಸಂಸ್ಕೃತ ತಾಯಿ ಬೇರಾಗಿದೆ. ವ್ಯಾಕರಣ ಶುದ್ಧತೆಯನ್ನು ಸಂಸ್ಕೃತ ಭಾಷೆ ಕಲಿಸುತ್ತದೆ ಜೊತೆಗೆ ಪ್ರಾಚೀನ ಗ್ರಂಥಗಳೆಲ್ಲವೂ ಸಂಸ್ಕೃತದಿAದ ರಚಿತವಾಗಿವೆ. ಸಂಸ್ಕೃತ ಸಂವಹನ ಭಾಷೆಯಾಗಿದೆ. ತರಗತಿಯಲ್ಲಿ ಮಕ್ಕಳು ಶ್ರದ್ಧೆ ಹಾಗೂ ಆಸಕ್ತಿಯಿಂದ ಸಂಸ್ಕೃತ ಭಾಷೆಯನ್ನು ಕಲಿತು ಶ್ರೇಷ್ಠ ವಿದ್ವಾಂಸರಾಗಲು ಸಾಧ್ಯವಿದೆ ಎಂದು ತಿಳಿಸಿದರು. ಧಾತ್ರಿ. ಸಂಸ್ಕೃತೋತ್ಸವ ಸಂಚಾಲಕ ಡಾ. ಬಿ ಪಿ ಷಡಕ್ಷರಿ, ಡಾ. ಸ್ವರ್ಣದತ್ತ, ಎಸ್ ಚಂದ್ರಮೌಳೇಶ್ವರ ಉಪಸ್ಥಿತರಿದ್ದರು.
ಸಂಸ್ಕೃತೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ, ರಸಪ್ರಶ್ನೆ, ಭಾಷಣ ಸ್ಪರ್ಧೆ, ಪದಸ್ಮರಣೆ ಮತ್ತು ಸಂಸ್ಕೃತದಲ್ಲಿ ಜಾಹಿರಾತು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸಂಸ್ಕೃತ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ನಂತರ ಶಿಶುಪಾಲವಧಾ ನಾಟಕ ಪ್ರದರ್ಶಿತವಾಯಿತು.