
ಪಿರಿಯಾಪಟ್ಟಣದಲ್ಲಿ ಡಿ. ದೇವರಾಜ ಅರಸು ರವರ ಜಯಂತಿ ಆಚರಣೆ
ಪಿರಿಯಾಪಟ್ಟಣ : ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರರು ಎಂದು ಎಂದು ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಲಕ್ಷ್ಮಿಕಾಂತ್ ಹೇಳಿದರು.
ಪಟ್ಟಣದ ಅರಸು ಕಲಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ರವರ 111 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲು ಕಲ್ಪಿಸಲು ಅರಸು ಸಾಕಷ್ಟು ಶ್ರಮಿಸಿದರು. ಅವರು ಅನುಷ್ಠಾನಗೊಳಿಸಿದ ಯೋಜನೆಗಳು ಸಮಾಜಕ್ಕೆ ದಾರಿದೀಪವಾಗಿದೆ ಉಳುವವನಿಗೆ ಭೂಮಿ ಯೋಜನೆ, ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯದಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅರಸು ಅವರು ಜೀತದಾಳು ಹಾಗೂ ಮಲಹೊರುವ ಪದ್ಧತಿ ನಿಷೇಧಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದರು. ಅವರು ಎಲ್ಲಾ ಬಡವರಿಗೂ ವಸತಿ ಸೌಲಭ್ಯ, ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿದರು. ಮೈಸೂರು ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡ ದೇವರಾಜು ಅರಸು ಅವರು ರಾಜ್ಯದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಏಕತೆಗೆ ಮಹತ್ವದ ಕೊಡುಗೆ ನೀಡಿದರು. ಅಸಮಾನತೆ ತೊಡೆದು ಹಾಕಲು ಹೆಚ್ಚು ಶ್ರಮವಹಿಸಿ ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಯೋಜನೆಗಳು ಇಂದಿಗೂ ಮುಂದುವರಿಯುತ್ತಿವೆ. ಅವರ ಉದಾತ್ತ ಚಿಂತನೆ ಎಲ್ಲರಿಗೂ ಆದರ್ಶವಾಗಬೇಕು ಎಂದು ಹೇಳಿದರು.
ತಾಲೂಕು ಆಶ್ರಯ ಸಮಿತಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ ಸಮಾಜ ಸುಧಾರಣೆಯೆ ದೇವರಾಜು ಅರಸುರವರ ಕನಸಾಗಿತ್ತು ಬಡತನ ನಿರ್ಮೂಲನೆಗೆ ಹೆಚ್ಚಿನ ಆದ್ಯತೆ ನೀಡಿದ ಅವರು ಸಾಮಾಜಿಕ ಪರಿವರ್ತನೆಗೆ ಕಾರಣಕರ್ತರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾರ್ಥಿ ನಿಲಯಗಳ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಸೇವೆ ಸಲ್ಲಿಸಿದ ಅಡುಗೆ ಸಿಬ್ಬಂದಿ ಮತ್ತು ಸಹಾಯಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಕ.ರಾ.ಸ. ನೌಕರರ ಸಂಘದ ತಾಲೂಕು ಅಧ್ಯಕ್ಷ ಹೊಸಳ್ಳಿ ಕೃಷ್ಣೇಗೌಡ, ಎಂ.ಡಿ.ಸಿ.ಸಿ. ನಿರ್ದೇಶಕ ಲೋಕೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಉಪ ತಹಸೀಲ್ದಾರ್ ಶ್ರೀನಿವಾಸ್, ಮುಖಂಡರಾದ ದೇವರಾಜು ಅರಸು, ವಿಜಯರಾಜ್ ಅರಸ್ ಸೇರಿದಂತೆ ಬಿಸಿಎಂ ನಿಲಯಗಳ ವಿದ್ಯಾರ್ಥಿಗಳು, ಮೇಲ್ವಿಚಾರಕರು ಸೇರಿದಂತೆ ಇತರರು ಇದ್ದರು