
ಮೈಸೂರು; ಸಚಿವ ಬಿ. ನಾಗೇಂದ್ರ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಪ್ರಕರಣದಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದ ಅಕ್ರಮ ವರ್ಗಾವಣೆ ಮತ್ತು ದುರುಪಯೋಗ ಮಾಡಿಕೊಂಡಿರುವ ಆರೋಪಗಳು ಅತ್ಯಂತ ಗಂಭೀರವಾಗಿವೆ. ಇಂತಹ ಸಂದರ್ಭದಲ್ಲಿ, “ನಾನು ದಲಿತ, ಆದಿವಾಸಿ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಬಿಜೆಪಿ ನನ್ನನ್ನು ವಿರೋಧಿಸುತ್ತಿದೆ” ಎಂದು ಹೇಳುವುದು ಹಾಸ್ಯಾಸ್ಪದ ಎಂದು ಮೈಸೂರು ಮಹಾನಗರ ಬಿಜೆಪಿ ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮದೇ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದ ದುರುಪಯೋಗದ ಆರೋಪಗಳು ಎದುರಾಗಿರುವಾಗ, ಅದರ ನೈತಿಕ ಹೊಣೆಗಾರಿಕೆಯನ್ನು ಯಾರು ಹೊರಬೇಕು ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿದೆ.
ಸಂವಿಧಾನದ ಮೇಲೆ ಗೌರವ ಮತ್ತು ಸಾರ್ವಜನಿಕ ಜೀವನದಲ್ಲಿ ನೈತಿಕತೆ ಇದ್ದರೆ, ಮೊದಲು ನೈತಿಕ ಹೊಣೆಗಾರಿಕೆಯನ್ನು ಸ್ವೀಕರಿಸಿ ಜನರ ಮುಂದೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣವು ಕೇವಲ ಹಣಕಾಸಿನ ಅಕ್ರಮದ ಆರೋಪವಲ್ಲ; ಪರಿಶಿಷ್ಟ ಪಂಗಡಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣಕ್ಕೆ ಸಂಬAಧಿಸಿದ ಗಂಭೀರ ವಿಷಯವಾಗಿದೆ. ತನಿಖಾ ಸಂಸ್ಥೆಗಳ ಪ್ರಕಾರ, ನಿಗಮದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿ, ನಂತರ ನಗದು, ಚಿನ್ನಾಭರಣ ಹಾಗೂ ಇತರೆ ಆಸ್ತಿಗಳ ರೂಪಕ್ಕೆ ಪರಿವರ್ತಿಸಿದ ಆರೋಪಗಳು ಕೇಳಿಬಂದಿವೆ.
ತನಿಖಾ ಸಂಸ್ಥೆಗಳ ದಾಖಲೆಗಳ ಪ್ರಕಾರ, ನಿಗಮದ ಹಣದಲ್ಲಿ 89.63 ಕೋಟಿಯಷ್ಟು ಮೊತ್ತ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪವಿದ್ದು, ನಕಲಿ ದಾಖಲೆಗಳು, ನಕಲಿ ಬ್ಯಾಂಕ್ ಖಾತೆಗಳು, ಚೆಕ್‌ಗಳು ಹಾಗೂ ಖಖಿಉS ವಹಿವಾಟುಗಳನ್ನು ಬಳಸಿರುವುದಾಗಿ ತನಿಖೆಯಲ್ಲಿ ಹೇಳಲಾಗಿದೆ. ಅಲ್ಲದೆ, ದುರುಪಯೋಗವಾಗಿದೆ ಎಂದು ಆರೋಪಿಸಲಾದ ಹಣದ ಒಂದು ಭಾಗವನ್ನು ಚುನಾವಣಾ ಚಟುವಟಿಕೆಗಳು ಮತ್ತು ವೈಯಕ್ತಿಕ ಉದ್ದೇಶಗಳಿಗೆ ಬಳಸಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿ ಕೇಳಿಬಂದಿದೆ.
ಇಷ್ಟೆಲ್ಲ ಗಂಭೀರ ಆರೋಪಗಳು ಮತ್ತು ತನಿಖೆಗಳು ನಡೆಯುತ್ತಿರುವಾಗ ಕಾಂಗ್ರೆಸ್ ಸರ್ಕಾರವು ಈ ಪ್ರಕರಣವನ್ನು ರಾಜಕೀಯವಾಗಿ ಸಮರ್ಥಿಸಿಕೊಳ್ಳುವ ಬದಲು, ಸತ್ಯವನ್ನು ಸಂಪೂರ್ಣವಾಗಿ ಜನರ ಮುಂದೆ ಇಡಬೇಕು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದ ದುರುಪಯೋಗವಾಗಿದ್ದರೆ, ಅದು ಆ ಸಮುದಾಯದ ಜನರ ಹಕ್ಕಿನ ಮೇಲಿನ ದ್ರೋಹವಾಗಿದೆ ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಪಂಗಡಗಳ ಕಲ್ಯಾಣದ ಹಣವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಗಳಿಗೆ ಬಳಸಬಾರದು. ದುರುಪಯೋಗವಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟ ಪ್ರತಿಯೊಂದು ರೂಪಾಯಿ ಹಣವನ್ನೂ ವಾಪಸ್ ಪಡೆದು, ನಿಜವಾದ ಫಲಾನುಭವಿಗಳ ಕಲ್ಯಾಣಕ್ಕೆ ಬಳಸಬೇಕು.
ಜನರ ತೆರಿಗೆ ಹಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣದ ಹಣಕ್ಕೆ ಸರ್ಕಾರ ಸಂಪೂರ್ಣ ಹೊಣೆಗಾರಿಕೆಯನ್ನು ಹೊಂದಿರಬೇಕು. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಳಂಕದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಸಂಪುಟದಿAದ ಕೈಬಿಟ್ಟು, ಈ ಪ್ರಕರಣದ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು. ವಾಲ್ಮೀಕಿ ನಿಗಮದ ಹಗರಣದ ಸಂಪೂರ್ಣ ಸತ್ಯ ಹೊರಬಂದು, ತಪ್ಪಿತಸ್ಥರಿಗೆ ಕಾನೂನುಬದ್ಧ ಶಿಕ್ಷೆಯಾಗುವವರೆಗೆ ಭಾರತೀಯ ಜನತಾ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ