
ಮೈಸೂರು: ಈ ಬಾರಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಆಚರಣೆಯ ಅಂಗವಾಗಿ ಆಯೋಜಿಸಲಾಗುವ ದಸರಾ ಕವಿಗೋಷ್ಠಿ ಕಾರ್ಯಕ್ರಮಗಳಿಗಾಗಿ ಕವಿಗೋಷ್ಠಿ ಉಪಸಮಿತಿಯನ್ನು ನೇಮಕ ಮಾಡಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ. ಎಂ. ದಾಸೇಗೌಡ ದಸರಾ ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿಯಾಗಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ನಂಜಯ್ಯ ಹೊಂಗನೂರು ಕಾರ್ಯಾಧ್ಯಕ್ಷರಾಗಿ, ಸಿದ್ದಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ತ್ರಿವೇಣಿ ಕಾರ್ಯದರ್ಶಿಯಾಗಿ ಹಾಗೂ ದೇವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷ ಉಪನ್ಯಾಸಕರಾದ ಡಾ. ಉಮೇಶ್ ಬೇವಿನಹಳ್ಳಿ ಸಮನ್ವಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ದಸರಾ ಕವಿಗೋಷ್ಠಿ ಸಮಿತಿಯಿಂದ ಚಿಗುರು ಕವಿಗೋಷ್ಠಿ, ಯುವ ಕವಿಗೋಷ್ಠಿ, ಹಾಸ್ಯ,ಚುಟುಕುಗೋಷ್ಠಿ ಹಾಗೂ ಜನಪದ ಕಾವ್ಯಗೋಷ್ಠಿಗಳಿಂದ ಕವಿ, ಗಾಯಕರುಗಳಿಂದ ಅರ್ಜಿ ಆಹ್ವಾನಿಸಿದೆ.
ಚಿಗುರು ಕವಿಗೋಷ್ಠಿಯಲ್ಲಿ ಕಾವ್ಯಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮ್ಮ ಸ್ವ-ವಿವರದೊಂದಿಗೆ ಎರಡು ಅತ್ಯುತ್ತಮ ಕವನಗಳನ್ನು ಸಲ್ಲಿಸಬಹುದು. ಯುವ ಕವಿಗೋಷ್ಠಿಗೆ ಸ್ವ-ವಿವರ ಹಾಗೂ ಎರಡು ಉತ್ತಮ ಕವಿತೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಕನಿಷ್ಠ ಒಂದು ಕವನ ಸಂಕಲನ ಪ್ರಕಟಿಸಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹಾಸ್ಯ, ಚುಟುಕುಗೋಷ್ಠಿಯಲ್ಲಿ ಭಾಗವಹಿಸುವವರು ಸ್ವ-ವಿವರದೊಂದಿಗೆ ಎರಡು ಹಾಸ್ಯ ಅಥವಾ ಚುಟುಕು ಕವನಗಳನ್ನು ಕಳುಹಿಸಿಕೊಡಬೇಕು.
ಜನಪದ ಕಾವ್ಯಗೋಷ್ಠಿಯಲ್ಲಿ ಆಸಕ್ತರು ಜನಪದ ಕಾವ್ಯ ಪ್ರಕಾರದ ಮಾಹಿತಿ ಹಾಗೂ ಸ್ವ-ವಿವರದೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ಕಳೆದ ಎರಡು ವರ್ಷಗಳ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಈ ಬಾರಿ ಅವಕಾಶವಿರುವುದಿಲ್ಲ.
ಆಸಕ್ತರು ತಮ್ಮ ಅರ್ಜಿಗಳನ್ನು ಸೆ.15 ಸಂಜೆ 5 ಗಂಟೆಯೊಳಗೆ ನೇರವಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಪ್ರೊ. ನಂಜಯ್ಯ ಹೊಂಗನೂರು, ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-570006 ಈ ವಿಳಾಸಕ್ಕೆ ತಲುಪಿಸಬೇಕಾಗಿದ್ದು, ಹೆಚ್ಚಿನ ಮಾಹಿತಿಗೆ 9900785982, 9611811461 ಅಥವಾ 9945443034 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ದಸರಾ ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ. ಎಂ. ದಾಸೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.