
ಮೈಸೂರು: ಕೂಲಿಕಾರ್ಮಿಕರು ಆಗಾಗ್ಗೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸಲಹೆ ನೀಡಿದರು.
ಮೈಸೂರು ಜಿಲ್ಲೆಯ ಕರೀಮುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ಊರು ಮುಂದಿನ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಕೂಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ತಿಂಗಳ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸದೃಢ ಆರೋಗ್ಯ ಕಾಪಾಡಿಕೊಳ್ಳುವಂತೆ ಅವರ ಆರೋಗ್ಗದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದರು. ವಿಬಿ ಜಿ ರಾಮ್ ಜಿ ಯೋಜನೆಯು ಜುಲೈ 1ರಿಂದ ಜಾರಿಗೊಂಡಿದ್ದು, 382 ರೂಪಾಯಿ ಕೂಲಿ ಹಣ, 125 ದಿನ ಮಾನವ ದಿನಗಳ ಸೃಜನೆಯಾಗಲಿದ್ದು, ಒಂದು ಕುಟುಂಬಕ್ಕೆ 47750 ರೂ. ದೊರೆಯಲಿದೆ. ಆದ್ದರಿಂದ ತಮ್ಮ ಪರಿಚಯದ ಕೂಲಿಕಾರ್ಮಿಕರನ್ನು ಸಹ ಈ ಯೋಜನೆಯಡಿ ಉದ್ಯೋಗಕ್ಕೆ ಬರುವಂತೆ ಮಾಡುವುದರಿಂದ ತಾವು ಸಹ ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂದರು.
ಬೆಲೆ ಏರಿಕೆ ಜನರ ಪಾಲಿಗೆ ನುಂಗಲಾರದ ತುತ್ತಾಗುತ್ತಿದ್ದು, ಈ ಹೊಡೆತದಿಂದ ಸಾಮಾನ್ಯ ಜನರು ಪಾರಾಗುವ ಸದುದ್ದೇಶದಿಂದ ಹಾಗೂ ಬಡವರ ಸಬಲೀಕರಣಕ್ಕಾಗಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಗೊಂಡಿದೆ ಎಂದು ಜಾರಿ ಹಿಂದಿನ ಉದ್ದೇಶವನ್ನು ಕೂಲಿ ಕಾರ್ಮಿಕರೊಂದಿಗೆ ಹಂಚಿಕೊAಡರು.
ಈ ವೇಳೆ ಸಚಿವರು ಸ್ವತಃ ಹಾರೆ ಮತ್ತು ಬಾಣಲಿ ಹಿಡಿದು ಟ್ರಾಕ್ಟರ್ ಗೆ ಮಣ್ಣು ತುಂಬಿಸುವ ಮೂಲಕ ಕೂಲಿಕಾರರನ್ನು ಪ್ರೋತ್ಸಾಹಿಸಿದರು.
ಈ ವೇಳೆ ಶಾಸಕ ಹೆಚ್.ಡಿ.ಹರೀಶ್ ಗೌಡ, ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಉಪ ಕಾರ್ಯದರ್ಶಿ(ಅಭಿವೃದ್ಧಿ ಭೀಮಪ್ಪ ಕೆ ಲಾಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ವಿಬಿ ಜಿ ರಾಮ್ ಜಿ ಸಹಾಯಕ ನಿರ್ದೇಶಕ ಎಂ.ಎಸ್. ರಾಜೇಶ್ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಯವರು, ವಿಬಿ ಜಿ ರಾಮ್ ಜಿ ಯೋಜನೆಯ ಎಲ್ಲಾ ಸಿಬ್ಬಂದಿಯವರು ಹಾಗೂ ಗ್ರಾಮ ಪಂಚಾಯಿತಿಯವರು ಹಾಜರಿದ್ದರು