
ಪಿರಿಯಾಪಟ್ಟಣ : ಪಿರಿಯಾಪಟ್ಟಣ ಬರಪೀಡಿತ ತಾಲೂಕನ್ನು ಪ್ರದೇಶವೆಂದು ಸರ್ಕಾರ ಘೋಷಿಸದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಇದಕ್ಕೆ ಶಾಸಕ ಕೆ. ವೆಂಕಟೇಶ್ ನಿರ್ಲಕ್ಷತನವೇ ಕಾರಣವಾಗಿದೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಆರೋಪಿಸಿದರು.
ಪಟ್ಟಣದ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಿರಿಯಾಪಟ್ಟಣ ತಾಲೂಕಿನಲ್ಲಿ ವಾಣಿಜ್ಯ ಬೆಳೆ ಹೊಗೆಸೊಪ್ಪು, ಜೋಳ, ರಾಗಿ, ಭತ್ತ ಸೇರಿದಂತೆ ಇನ್ನಿತರೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಇಲ್ಲಿನ ರೈತರು ಮಳೆಯನ್ನೇ ಆಶ್ರಯಿಸಿ ಬೇಸಾಯ ಮಾಡುತ್ತಾರೆ. ತಾಲೂಕಿನಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗು ತ್ತಿಲ್ಲ ಬೆಳೆದ ಬೆಳೆಗಳು ಕೂಡ ಮಳೆ ಇಲ್ಲದೆ ಇಳುವರಿ ಕಡಿಮೆಯಾಗಿದೆ. ಎಲ್ಲಾ ಬೆಳೆಗಳು ನಾಶವಾಗಿದ್ದು ರೈತರು ಸಾಕಷ್ಟು ನಷ್ಟ ಅನುಭವಿಸು ವಂತಾಗಿದೆ. ಆದರೆ ಸ್ಥಳೀಯ ಶಾಸಕ ಕೆ. ವೆಂಕಟೇಶ್ ರವರು ರೈತರ ಈ ಸಂಕಷ್ಟವನ್ನು ಅರಿಯದೆ ನಿರ್ಲಕ್ಷತನ ವಹಿಸುತ್ತಿರುವುದು ಖಂಡನೀಯವಾದದ್ದು. ತಾಲೂಕಿನ ಅಭಿವೃದ್ದಿಯ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಇವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯರವರು ಬರಪೀಡಿತ ಪ್ರದೇಶಗಳ ವೀಕ್ಷಣೆಗೆ ತಾಲ್ಲೂಕಿಗೆ ಆಗಮಿಸಿದ ಸಂದರ್ಭದಲ್ಲಿಯೂ ಕೂಡ ಸಚಿವರೊಂದಿಗೆ ಸಹಕಾರ ನೀಡದೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆ ಅಸಡ್ಡೆತನ ತೋರಿಸಿದ್ದಾರೆ. ಶಾಸಕ ಕೆ. ವೆಂಕಟೇಶ್ ರವರ ಈ ವರ್ತನೆಗೆ ತಾಲ್ಲೂಕಿನ ರೈತರು ತೀವ್ರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಶಾಸಕ ಕೆ.ವೆಂಕಟೇಶ್ ರವರು ಸರ್ಕಾರದೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ಪಿರಿಯಾಪಟ್ಟಣವನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಲು ಶ್ರಮಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಸಾರ್ವಜ ನಿಕರೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಐಲಾಪುರ ರಾಮ ಮಾತನಾಡಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ವಕ್ತರಾರು ರಾಜ್ಯದ ವಿವಿಧ ಭಾಗಗಳಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರಪೀಡಿತ ಪ್ರದೇಶಗಳ ಬೆಳೆ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಆದರೆ ಸರ್ಕಾರ ಪಿರಿಯಾಪಟ್ಟಣ ತಾಲೋಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ತಾಲೂಕಿಗೆ ರೈತರಿಗೆ ಮಾಡಿದ ಮೋಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶಿವಣ್ಣ, ಮಾಜಿ ಎಂ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸಿ. ಎನ್. ರವಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ರಘುನಾಥ್, ಎ.ಟಿ.ರಂಗಸ್ವಾಮಿ, ಮಾಜಿ ಗ್ರಾ ಪಂ ಸದಸ್ಯ ಚೆಲುವರಾಜ್ ಹಾಜರಿದ್ದರು.