
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
ಪಿರಿಯಾಪಟ್ಟಣ: ಭೂಮಿ ಮೇಲೆ ಅಧರ್ಮ ನಾಶ ಮತ್ತು ಧರ್ಮದ ಸ್ಥಾಪನೆಗಾಗಿ ಜನ್ಮ ತಾಳಿದವನೇ ಶ್ರೀಕೃಷ್ಣ ಪರಮಾತ್ಮ ಎಂದು ಪಿರಿಯಾಪಟ್ಟಣ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಹೆಚ್ ಎನ್ ಸುಧಾಕರ್ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಧರ್ಮದ ಅವನತಿ ಕಾಲದಲ್ಲಿ ಪುನಃ ಧರ್ಮ ಸ್ಥಾಪನೆಗಾಗಿ ದೇವರೇ ಅವತಾರ ಪುರುಷನಾಗಿ ಆಗಮಿಸಿ ಧರ್ಮ ಸಂಸ್ಥಾಪನೆಗೆ ಮುಂದಾಗುತ್ತಾರೆ ಎಂಬುದಕ್ಕೆ ಶ್ರೀಕೃಷ್ಣ ಅವತಾರ ಒಂದಾಗಿದೆ. ವಿಷ್ಣುವಿನ ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ದ, ಕಲ್ಕಿ ಅವತಾರಗಳು ಬಹಳ ಪ್ರಸಿದ್ಧವಾಗಿದ್ದು. ಕೃಷ್ಣನ ಅವತಾರ ಈ ಹತ್ತು ಅವತಾರಗಳಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿದ್ದು ಶ್ರೀಕೃಷ್ಣನು ಪೂರ್ಣಾವತಾರಿ ಎಂದು ಕರೆಯುತ್ತಾರೆ ಶ್ರೀಕೃಷ್ಣನಷ್ಟು ನಮ್ಮಲ್ಲಿ ಒಂದಾಗಿ ಬೆರೆಯಬಲ್ಲ ದೈವ ಇನ್ನೊಬ್ಬನಿಲ್ಲ. ಪ್ರತಿ ಕ್ಷಣವೂ ಮನುಷ್ಯನಾಗಲು ತವಕಿಸುವ ದೈವವೆಂದರೆ ಅದು ಶ್ರೀಕೃಷ್ಣನೇ ಹೌದು, ಶ್ರೀಕೃಷ್ಣ ತತ್ವಗಳು ಕೇವಲ ಜೀವನದ ಯಾವುದೋ ಒಂದು ಭಾಗಕ್ಕೆ ಮಾತ್ರ ಸೀಮೀತವಾಗಿಲ್ಲ. ಅದು ಸಮಗ್ರ ಜೀವನಕ್ಕೂ ಆದರ್ಶವಾಗಿದೆ ಎಂದರು.
ಇಂಜಿನಿಯರ್ ಅಶೋಕ್ ಮಾತನಾಡಿ ಕೃಷ್ಣ ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ ತನ್ನ ಉಪದೇಶಕ್ಕೆ ತಾನೇ ಉದಾಹರಣೆಯಾದವನು. ಜೀವನದಲ್ಲಿ ಎಷ್ಟೆಲ್ಲ ಕಷ್ಟ, ಅವಮಾನಗಳನ್ನು ಎದುರಿಸಿದರೂ ಅವನು ತನ್ನ ಕರ್ತವ್ಯ ಪ್ರಜ್ಞೆಯಿಂದ ದೂರ ಸರಿದವನಲ್ಲ. ಅವನಷ್ಟು ಕಷ್ಟ ಅನುಭವಿಸಿದವರು ಬಹುಶಃ ಇತಿಹಾಸದಲ್ಲಿ ಇನ್ನೊಬ್ಬರು ಇರಲಾರರು. ಅವನು ಹುಟ್ಟುವುದಕ್ಕೂ ಮೊದಲೇ ಸಾವಿನ ಮಡಿಲಿನಲ್ಲಿ ಬಿದ್ದವನು. ಎಷ್ಟೆಲ್ಲ ಬಂಧುಗಳ, ಸ್ನೇಹಿತರ, ರಾಜ, ಮಹಾರಾಜರ ನಡುವೆ ಬದುಕಿದ್ದವನು ಕೊನೆಗೆ ಪ್ರಾಣವನ್ನು ತ್ಯಾಗ ಮಾಡುವಾಗ ಆತ್ಮೀಯರು ಯಾರೂ ಅವನ ಸಮೀಪದಲ್ಲಿ ಇರಲಿಲ್ಲ. ಈ ಹುಟ್ಟು, ಸಾವುಗಳ ನಡುವೆ ಅವನು ನೆಮ್ಮದಿಯಾಗಿದ್ದ ದಿನಗಳೇ ಕಡಿಮೆ. ಹೀಗಿದ್ದರೂ ತನ್ನ ವೈಯಕ್ತಿಕ ಸುಖ, ದುಃಖಗಳನ್ನು ಗಣನೆಗೆ ತೆಗೆದುಕೊಳ್ಳದೆ, ಕರ್ತವ್ಯ ಮೆರೆದವನು ಶ್ರೀಕೃಷ್ಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರವೀಣ್, ಕಿರಣ್, ಮುಖ್ಯ ಶಿಕ್ಷಕಿ ದಿವ್ಯ ಸೇರಿದಂತೆ ಇತರರು ಇದ್ದರು