
ಮೈಸೂರು; ನಗರದ ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ರಾಂತ ಗಣಿತಶಾಸ್ತç ಪ್ರಾಧ್ಯಾಪಕ ಪ್ರೊ. ಜಿ. ಸುಂದರ ರಾಘವನ್ ಅವರು ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಬದುಕು ಹಾಗೂ ವಿಚಾರಗಳು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ ಎಂದರು. ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಾಧಾಕೃಷ್ಣನ್ ಅವರು, ತಮ್ಮ ಜನ್ಮದಿನವನ್ನೇ ಶಿಕ್ಷಕರಿಗಾಗಿ ವಿಶೇಷ ದಿನವನ್ನಾಗಿಸಿದರು. ಶಿಕ್ಷಕರು ಶಿಸ್ತುಬದ್ಧ ಜೀವನ, ದಕ್ಷತೆ ಮತ್ತು ಉತ್ತಮ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಬೇಕು. ವಿದ್ಯಾರ್ಥಿಗಳು ಸದಾ ಅವರ ಮಾರ್ಗದರ್ಶನವನ್ನು ಪಡೆಯಬೇಕು. ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಗುರಿಯನ್ನು ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ಪರಿಶ್ರಮ ಮತ್ತು ಆಸಕ್ತಿಯಿಂದ ಪ್ರಯತ್ನಿಸಿದಲ್ಲಿ ಯಶಸ್ಸು ದೊರಕುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಸಿಎ ವಿಶ್ವನಾಥ.ಎ ಮಾತನಾಡಿ, ಉತ್ತಮ ಶಿಕ್ಷಕರು ಜ್ಞಾನದೊಂದಿಗೆ ಮೌಲ್ಯಯುತವಾದ ಬದುಕನ್ನು ರೂಪಿಸಲು ಮಾರ್ಗದರ್ಶನ ತೋರುವ ಗುರುಗಳಾಗಿರುತ್ತಾರೆ. ವಿದ್ಯಾರ್ಥಿಗಳು ಯಶಸ್ವಿಯಾಗಿ ತಮ್ಮ ಜೀವನವನ್ನು ರೂಪಿಸಿಕೊಂಡು ಸಾಧಕರಾಗುವುದನ್ನು ಕಂಡಾಗ ಶಿಕ್ಷಕರ ಶ್ರಮ ಸಾರ್ಥಕತೆಯನ್ನು ಪಡೆಯುತ್ತದೆ. ಎಂದರು.
ತಮ್ಮ ತಂದೆ ತಾಯಿ ಹಾಗೂ ಉತ್ತಮ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬದುಕಿನ ಎಲ್ಲಾ ಹಂತದಲ್ಲೂ ಯಶಸ್ವಿಯಾಗಬಹುದು. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ, ಜವಾಬ್ದಾರಿಯಿಂದ ತಮ್ಮ ಸ್ವಕ್ಷೇತ್ರದಲ್ಲಿ ನ್ಯಾಯಪರತೆ ಹಾಗೂ ಕರ್ತವ್ಯ ಪಾಲನೆಯಿಂದ ಕಾರ್ಯನಿರ್ವಹಿಸಬೇಕು. ಗುರಿ ತೋರಿದ ಶಿಕ್ಷಕರಿಗೆ ಗೌರವವನ್ನು ನೀಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಸತತ ಪ್ರಯತ್ನಶೀಲರಾಗಬೇಕು ಎಂದರು.
ಕಾಲೇಜಿನ ಪ್ರಾಚಾರ್ಯರಾದ ಎಚ್. ಸತ್ಯಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಜೊತೆ ಶಿಕ್ಷಕರಿಗೆ ಹಾಗೂ ಗುರುಹಿರಿಯರಿಗೆ ಗೌರವವನ್ನು ಕೊಟ್ಟು ವಿನಯಶೀಲತೆಯಿಂದ ನಡೆದುಕೊಳ್ಳಬೇಕು. ಈ ದೇಶ ಕಂಡ ಉತ್ತಮ ಶಿಕ್ಷಕರೂ, ತತ್ವಜ್ಞಾನಿಗಳೂ ಹಾಗೂ ದೇಶದ 2ನೆಯ ರಾಷ್ಟçಪತಿಯಾಗಿದ್ದ ಡಾ. ರಾಧಕೃಷ್ಣನ್ ಅವರ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯ. ಅವರು ಶಿಕ್ಷಣಕ್ಕೆ ಹಾಗೂ ಶಿಕ್ಷಕರಿಗೆ ಅಪಾರ ಗೌರವ ನೀಡುತ್ತಿದ್ದರು. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ನಿಯುಕ್ತಿಗೊಂಡು ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಹೊರಡುವಾಗ, ಅವರ ಶಿಷ್ಯರು ವಿಶ್ವವಿದ್ಯಾನಿಲದಿಂದ ರೈಲ್ವೆ ನಿಲ್ದಾಣಕ್ಕೆ ಅವರನ್ನು ಸಾರೋಟು ಗಾಡಿಯಲ್ಲಿ ಕೂಡಿಸಿ, ಕುದುರಗೆಳ ಬದಲು ತಾವೇ ಗಾಡಿಯನ್ನು ಹೊತ್ತು ಮೈಸೂರು ನಿಲ್ದಾಣದವರೆಗೆ ಕರೆದೊಯ್ದ ಘಟನೆ ಅವರಿಗಿದ್ದ ಗೌರವವನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳು ಸತ್ಯಪರತೆ, ಬ್ರಹ್ಮಚರ್ಯ, ವ್ಯಾಯಾಮ, ನೈತಿಕತೆ, ಧರ್ಮ, ಭಕ್ತಿ, ಯೋಗ ಮುಂತಾದ ಸದ್ಗುಣಗಳನ್ನು ಬದುಕಲ್ಲಿ ಪಾಲಿಸಬೇಕು ಎಂದರು.
ಶ್ರೀವಿಭಾ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ಜಿ. ಸುಂದರ ರಾಘವನ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಂಚರ, ವೈಷ್ಣವಿ , ನಿಧಿಶ್ರೀ, ತನಿಷ್ಕಾ ಮತ್ತಿತರರು ಹಾಜರಿದ್ದರು.