
ಮೈಸೂರು; ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಬಳಕೆ ವೃತ್ತಿ ಬದುಕಿನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಸಚಿವ ಡಾ. ಬಿ. ಎಸ್. ಹರೀಶ್ ತಿಳಿಸಿದರು.
ಬುಧವಾರ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗಣಕ ವಿಜ್ಞಾನ ವಿಭಾಗದ ವತಿಯಿಂದ ‘ಕೃತಕ ಬುದ್ಧಿಮತ್ತೆಯ ಭವಿಷ್ಯ : ಕೌಶಲ್ಯಗಳು, ಉಪಕರಣಗಳು ಮತ್ತು ಶೋಧನೆ’ ವಿಷಯ ಕುರಿತಂತೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರವನ್ನು .ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಯುಗದಲ್ಲಿ ಕೃತಕ ಬುದ್ಧಿಮತ್ತೆಯು ಮಹತ್ತರ ಪಾತ್ರವನ್ನು ವಹಿಸಿದೆ. ಇದನ್ನು ಅಸಮರ್ಪಕವಾಗಿ ಮತ್ತು ಬೇಜವಾಬ್ದಾರಿಯಿಂದ ಬಳಸಿದರೆ, ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬಳಕೆಗೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳಲು ಇದು ಸೂಕ್ತ ಸಮಯವೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ಎಸ್. ಸಿದ್ದೇಶ ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಡೀನ್(ಸಂಶೋಧನೆ) ಡಾ. ವಿ. ಎನ್. ಮಂಜುನಾಥ್ ಮಾತನಾಡಿ, ಜಾಗತಿಕ ಆವಿಷ್ಕಾರಗಳ ಕ್ಷೇತ್ರದಲ್ಲಿ ಭಾರತವು ಗಣನೀಯ ಪಾತ್ರವನ್ನು ವಹಿಸಿದೆ. ಹೊಸ ಅವಕಾಶಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆಯ ಜ್ಞಾನ ಮತ್ತು ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ವಾಣಿಜ್ಯೀಕರಣಗೊಳಿಸಬೇಕೆಂದು ತಿಳಿಸಿದರು. ವಿವಿಧ ಕ್ಷೇತ್ರದ ಮೌಲ್ಯಗಳಿಗೆ ಕೃತಕ ಬುದ್ಧಿಮತ್ತೆಯನ್ನು ಸಮನ್ವಯಗೊಳಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ರೇಚಣ್ಣ, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೀತಿ ಹೆಚ್ ಯು, ಐಕ್ಯೂಎಸಿ ಸಂಯೋಜಕ ಮಲ್ಲೇಶ.ಆರ್, .ದೀಕ್ಷಾ, ಮಾನ್ಯ.ಎನ್, ಶುಭಶ್ರೀ.ವಿ, ಮಾನಸ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಮೂರು ಗೋಷ್ಟಿಗಳು ನಡೆಯಿತು.
ತಾಂತ್ರಿಕ ಗೋಷ್ಠಿ -1
ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಡಾ. ಬಿ ಎಸ್ ಹರೀಶ್ ಅವರು ‘ಕೃತಕ ಬುದ್ಧಿಮತ್ತೆಯ ಶೋಧನೆ’ ವಿಷಯ ಕುರಿತು ಮಾತನಾಡಿದರು
ತಾಂತ್ರಿಕ ಗೋಷ್ಠಿ- 2
ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಡೀನ್((ಸಂಶೋಧನೆ) ಅವರಾದ ಡಾ. ವಿ ಎನ್ ಮಂಜುನಾಥ್ ಆರಾಧ್ಯರವರು ‘ ವೈದ್ಯಕೀಯ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ‘ ವಿಷಯ ಕುರಿತು ಉಪನ್ಯಾಸ ನೀಡಿದರು.
ತಾಂತ್ರಿಕ ಗೋಷ್ಠಿ- 3
ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕರಾದ ಡಾ. ಎಸ್ ಸಿದ್ದೇಶ ಅವರು ‘ ಕೃತಕ ಬುದ್ಧಿಮತ್ತೆ ನಿಮಗಾಗಿ: ತರಗತಿಯಿಂದ ವೃತ್ತಿ ಬದುಕಿನಡೆಗೆ” ವಿಷಯ ಕುರಿತು ಮಾತನಾಡಿದರು.