
ಮೈಸೂರು: ನಾಡ ಹಬ್ಬ ಮೈಸೂರು ದಸರಾಗೆಂದು ಅರಮನೆ ನಗರಿ ಮೈಸ್ರರಿಗೆ ಆಗಮಿಸಿ, ಅಂಬಾವಿಲಾಸ ಅರಮನೆಯಲ್ಲಿಬೀಡು ಬಿಟ್ಟಿರುವ ಆನೆಗಳ ಎರಡನೇ ತಂಡವನ್ನು ಇಂದು ತೂಕ ಹಾಕಲಾಯಿತು. ಇಡೀ ಗಜಪಡೆಯಲ್ಲಿ ‘ಸುಗ್ರೀವ’ ಆನೆಯೇ ಬಲ ಭೀಮನಾಗಿ ಹೊರ ಹೊಮ್ಮಿದ. ಮೊದಲನೇ ಗಜಪಡೆ ತಂಡದಲ್ಲಿ ಬಂದಿದ್ದ ಶ್ರೀಕಂಠ ಆನೆಯು 5,770 ಕೆ.ಜಿ ತೂಗುವ ಮೂಲಕ ಹೆಚ್ಚು ತೂಕ ಇರುವ ಆನೆ ಎಂದು ಕರೆಯಿಸಿಕೊಂಡಿದ್ದ ಆದರೆ ಸುಗ್ರೀವ ಆನೆ ಅದಕ್ಕಿಂತ 80 ಕೆ.ಜಿ ಹೆಚ್ಚು ತೂಗಿದ್ದಾನೆ. ಈತ 5,850 ಕೆ.ಜಿ ತೂಗುವ ಮೂಲಕ ಗಜಪಡೆಗಳಲ್ಲಿ ಹೆಚ್ಚು ತೂಕ ಹೊಂದಿದೆ.
ಎರಡನೇ ತಂಡದಲ್ಲಿದ್ದ ಚೈತ್ರ ಆನೆ 3,295 ಕೆ.ಜಿ ಹಾಗೂ ರೂಪಾ ಆನೆ 3,260 ಕೆ.ಜಿ ತೂಗಿವೆ.
ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಪೂಜೆ ;
ವಿಶ್ವ ಪ್ರಸಿದ್ದವಾಗಿರುವ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ದಸರಾ ಗಜಪಡೆಗೆ ಗಣೇಶ ಚತುರ್ಥಿ ಪ್ರಯುಕ್ತ ಸೋಮವಾರ ‘ಗಜಪೂಜೆ’ ಸಲ್ಲಿಸಲಾಯಿತು.ಅರಮನೆ ಅರ್ಚಕ ಪ್ರಹ್ಲಾದರಾವ್ ಆನೆಗಳಿಗೆ ಪಂಚಫಲ, ಕೋಡುಬಳೆ, ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲುಸಕ್ಕರೆ, ಮೋದಕ ಮೊದಲಾದ ತಿನಿಸುಗಳನ್ನು ಅಣಿಗೊಳಿಸಿದರು. ಅನೆಗಳ ಸೊಂಡಿಲು, ಪಾದಗಳಿಗೆ ಅರಿಸಿನ, ಕುಂಕುಮ ಹಾಗೂ ಗಂಧ ಹಚ್ಚಿದರು. ಚಾಮರವನ್ನು ಬೀಸಿ, ಪಂಚಫಲ-ತಿನಿಸು ನೈವೇದ್ಯ ನೀಡಿದರು. ಅಧಿಕಾರಿಗಳು, ಮಾವುತರು, ಕಾವಾಡಿಗರಿಗೆ ಅರ್ಚಕರು ಗಣಪತಿ ಸ್ತೋತ್ರ ಹೇಳಿಸಿದರು. ಆನೆಗಳಿಗೆ ಬಿಲ್ವಪತ್ರೆ, ಪುಷ್ಪ ನಮನ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಹೂ ಮಳೆಗರೆದರು.
ಈ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷಿ÷್ಮÃಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ, ಅರಣ್ಯ ಸಂರಕ್ಷಣಾ ಅಧಿಕಾರಿ ರವಿಶಂಕರ್, ಡಿಸಿಎಫ್ ಗಳಾದ ಐ.ಬಿ.ಪ್ರಭುಗೌಡ, ಪರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಭಾಗವಹಿಸಿದರು.
ಪೂಜೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷಿ÷್ಮÃಕಾಂತ ರೆಡ್ಡಿ, ಶೀಘ್ರದಲ್ಲೇ ದಸರಾ ಗೋಲ್ಡ್ ಪಾಸ್ನ್ನು ಮಾರಾಟಕ್ಕೆ ಬಿಡುಗಡೆ ಮಾಡಲಾಗುವುದು, ಅದಕ್ಕಾಗಿ ಸಿದ್ಧತಾ ಕಾರ್ಯವನ್ನು ನಡೆಸಲಾಗಿದೆ. ಅರಮನೆ ಆವರಣದಲ್ಲಿ ಗಜಪಡೆಗೆ ವಿಶೇಷ ಪ್ರಜೆಯನ್ನು ಸಲ್ಲಿಸಿ, ದಸರಾ ಮಹೋತ್ಸವ ಯಾವುದೇ ಗೊಂದಲ, ಗಲಾಟೆ, ಅಹಿತಕರ ಘಟನೆಗಳಿಲ್ಲದಂತೆ ಶಾಂತಿಯುತವಾಗಿ, ಯಶಸ್ವಿಯಾಗಿ ನಡೆಯಲಿ, ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.

