
ನಂಜನಗೂಡು:
ತಾಲೂಕಿನ ಹೆಗ್ಗಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ 7 ಲಕ್ಷ 22 ಸಾವಿರ ಲಾಭದಲ್ಲಿ ಮುನ್ನಡೆಯುತ್ತಿದೆ, ರೈತರ ಆರ್ಥಿಕ ಸವಲತ್ತಿಗೆ ಸಹಕಾರ ಸಂಘಗಳು ಸಹಕಾರಿಯಾಗಿದೆ ಆದ್ದರಿಂದ ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಎಂದು ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ರೇವಣ್ಣ ಹೇಳಿದರು.
ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದಿಂದ ರೈತರಿಗೆ ಸುಮಾರು ₹1.2 ಕೋಟಿ ಸಾಲ ವಿತರಿಸಲಾಗಿದ್ದು, ಇದರಲ್ಲಿ 38 ಮಂದಿಗೆ ಕೆಸಿಸಿ ಸಾಲ ಹಾಗೂ 18 ಮಂದಿಗೆ ಎಂ.ಟಿ. ಸಾಲ ನೀಡಲಾಗಿದೆ. ಈ ಹಿಂದೆ ಸುಮಾರು ₹4.30 ಕೋಟಿ ಸಾಲ ವಿತರಿಸಲಾಗಿತ್ತು, ಅಲ್ಲದೆ ರೈತರನ್ನು ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿ ಅವರ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸಂಘದ ವತಿಯಿಂದ ಹೈನುಗಾರಿಕೆಗಾಗಿ ₹99.70ಲಕ್ಷ ಸಾಲ ನೀಡಲಾಗಿದೆ, ಒಟ್ಟಾರೆಯಾಗಿ ಈ ಬಾರಿ ರೈತರಿಗೆ ವಿವಿಧ ವಿವಿಧ ಉದ್ದೇಶಗಳಿಗೆ ₹6.63 ಕೋಟಿ ಸಾಲ ನೀಡಲಾಗಿದೆ, ರೈತರು ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಘದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ, ಆದ್ದರಿಂದ ಸಕಾಲದಲ್ಲಿ ಸಾಲ ಮರುಪಾವತಿಸಿ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ, ಉಪಾಧ್ಯಕ್ಷೆ ಪದ್ಮ, ನಿರ್ದೇಶಕರಾದ ಹೆಚ್.ಎಂ. ಮನೋಜ್, ಅಶೋಕ್ ಕುಮಾರ್, ಹೆಚ್.ಎಂ. ಮಲ್ಲೇಶ್, ನಂಜುಂಡಸ್ವಾಮಿ, ಹೆಚ್.ಜಿ. ಗೋವಿಂದರಾಜು, ಎಸ್.ಸೋಮಶೇಖರ್, ಮಹೇಶ್, ಪುಟ್ಟಮಾದಮ್ಮ, ಹೆಚ್.ಬಿ. ಲೋಕೇಶ್, ಹೆಚ್.ಎಸ್. ಅರ್ಪಿತಾ, ಆನಂದ್ ಸೇರಿದಂತೆ ಸಂಘದ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.