
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ' ಕಾರ್ಯಕ್ರಮದ ಭಾಗವಾಗಿ, ಪ್ರತಿ ಮನೆಯಲ್ಲಿ ಆಶೀರ್ವಾದದ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ ಮೈಸೂರಿನ ರಾಷ್ಟçಕವಿ ಕುವೆಂಪು ಅವರ ಮನೆ ಉದಯರವಿ’ಯಲ್ಲಿ ನಡೆಸಲಾಯಿತು.
ಮೈಸೂರು ವಿಭಾಗದ ಬಿಜೆಪಿಯ ಸಹಪ್ರಭಾರಿ ಡಾ. ಈ.ಸಿ. ನಿಂಗರಾಜ್‌ಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 176 ದೀಪಗಳನ್ನು ಬೆಳಗಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶಕ್ಕೆ ಇನ್ನಷ್ಟು ಉತ್ತಮ ನಾಯಕತ್ವ ನೀಡುವ ಶಕ್ತಿ ದೊರೆಯಲಿ ಎಂದು ಹಾರೈಸಲಾಯಿತು.
ಭಾರತವು ವಿಶ್ವಗುರುವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೇವಾ ಸಂಕಲ್ಪ ಮತ್ತಷ್ಟು ಬಲಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿ, ಅವರ ಜನ್ಮದಿನದ ಅಂಗವಾಗಿ ಶುಭಾಶಯಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಹಾಗೂ ರಾಷ್ಟçಕವಿ ಕುವೆಂಪು ಅವರ ಪುತ್ರಿ ತಾರಿಣಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಚಾಮರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಡಾ. ಹೇಮಾ ನಂದೀಶ್, ಶ್ರೀಮತಿ ಚಂದ್ರಕಲಾ, ಪ್ರಿಯದರ್ಶಿನಿ, ಪ್ರಕಾಶ್, ಅಶೋಕ್, ಬಾಲಸುಬ್ರಹ್ಮಣ್ಯ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ;
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒಂಟಿಕೊಪ್ಪಲಿನ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಹಾಗೂ ಸಂಕಲ್ಪ ನೆರವೇರಿಸಿದರು.
ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುವ ಶಕ್ತಿ ದೊರೆಯಲಿ. ಅವರ ನೇತೃತ್ವದಲ್ಲಿ ಭಾರತವು ಮತ್ತಷ್ಟು ಅಭಿವೃದ್ಧಿ ಹೊಂದಿ ವಿಶ್ವದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.