Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶರಣರ ಚಿಂತನೆ ಎಲ್ಲಾ ಕಾಲಕ್ಕೂ ಪ್ರಸ್ತುತ; ಪ್ರೊ. ಬಿ. ವಿ.ವಸಂತಕುಮಾರ್


ಮೈಸೂರು; ಶರಣರ ಚಿಂತನೆ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಬಿ ವಿ ವಸಂತಕುಮಾರ್ ಹೇಳಿದರು. .
ಶನಿವಾರ ಮೈಸೂರಿನ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರಿನ ನಗರ ಘಟಕ ಇವರ ಸಹಯೋಗದಲ್ಲಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ‘ವಚನಕಾರರ ಬದುಕು ಬರೆಹಗಳ ಪ್ರಸ್ತುತತೆ ಒಂದು ಸಂವಾದ’ ವಿಷಯ ಕುರಿತು ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು, ಶ್ರೀ ಬಸವೇಶ್ವರರ ಮತ್ತು ಪರಮಪೂಜ್ಯ ರಾಜೇಂದ್ರ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವರ್ತಮಾನದಲ್ಲಿ ತಮ್ಮೊಳಗಿನ ಅರಿವನ್ನು ಕಂಡುಕೊಳ್ಳುವುದಕ್ಕೆ ವಚನ ಸಾಹಿತ್ಯದ ಅಧ್ಯಯನ ಮುಖ್ಯ ಎಂದರು. ಅಂತರAಗವನ್ನು ತಿದ್ದುಕೊಳ್ಳುವುದಕ್ಕೆ ಮತ್ತು ಬದುಕಿನ ಸ್ಥಿತ್ಯಂತರಗಳನ್ನು ತಿಳಿಯುವುದಕ್ಕೆ ಶರಣರೆ ಮಾರ್ಗದರ್ಶಿಗಳಾಗಿದ್ದಾರೆ. ಶರಣರ ವಚನಗಳು ಧರ್ಮದ ಮತ್ತು ಸತ್ಯದ ಮಾತುಗಳಾಗಿವೆ ಎಂಬುದನ್ನು ನಾವು ತಿಳಿಯಬೇಕಿದೆ ಎಂದು ತಿಳಿಸಿದರು.
ನಾವು ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳೆಲ್ಲವನ್ನು ಕಾಯಕ ತತ್ವದಲ್ಲಿ ತಂದಾಗ., ವ್ಯಕ್ತಿತ್ವ ವಿಕಸನವಾಗುತ್ತದೆ. ಜಗತ್ತಿಗೆ ಆತ್ಮವಿಶ್ವಾಸದಿಂದ ಬದುಕುವುದನ್ನು ಕಲಿಸಿದವರು ಶರಣರು ಎಂಬುದನ್ನು ಮರೆಯಬಾರದು. ಇಷ್ಟಲಿಂಗ ಪೂಜೆ ಎಂಬುದು ವರ್ತಮಾನದಲ್ಲಿ ಆಧ್ಯಾತ್ಮ ವಿಜ್ಞಾನ ಮತ್ತು ಯೋಗ ವಿಜ್ಞಾನವಾಗಿದೆ ಎಂದರು. ಶರಣರ ಆಲೋಚನೆಗಳನ್ನು ಅನುಷ್ಠಾನ ಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟಸೂರಮಠ ಮಾತನಾಡಿ, ಇಂದಿನ ವರ್ತಮಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ನಾವು ಶರಣರ ದಾರಿಯನ್ನು ಅನುಸರಿಸಿದಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿನಿಯರು ನಮ್ಮ ಭವ್ಯ ಪರಂಪರೆಯನ್ನು ಗೌರವಿಸಿದಾಗ ಜೀವನದ ಸಾರ್ಥಕತೆ ಲಭಿಸುತ್ತದೆ ಎಂದರು. ನಮ್ಮ ಮನುಷ್ಯನ ಸಮಾಜವು ದೌರ್ಜನ್ಯದ ಬೀಡಾಗಿದೆ, ಇದರಿಂದ ಹೊರಬರಲು ಶರಣರ ಸಂದೇಶವನ್ನು ಪಾಲಿಸಬೇಕಾಗಿದೆ ಎಂದರು. ಇಂದಿನ ಯುವಜನತೆ ಅವಮಾನ,ಸೋಲಿನಿಂದ ಕುಗ್ಗದೆ ಶರಣರ ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕಿದಾಗ ಸಾರ್ಥಕತೆಯನ್ನು ಕಾಣುವುದಕ್ಕೆ ಸಾಧ್ಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರ ಘಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಜಯಪ್ಪ ಹೊನ್ನಾಳಿ ಮಾತನಾಡಿ, ಅವರು ಶರಣರ ವಿಚಾರಗಳು ದಾರಿದೀಪವಾಗಿದ್ದು, ಸಂವಾದ ಗೋಷ್ಠಿಯು ಅಮೃತಪಾನ ಉಂಡಷ್ಟೇ ಅನುಭವವನ್ನು ನೀಡಿತು. ಶರಣರ ವಿಚಾರಗಳು ಪ್ರಸ್ತುತ ಸಮಾಜಕ್ಕೆ ಅನುಕೂಲಕರವಾಗಿವೆ ಎಂದು ತಿಳಿಸಿದರು.
ಸಂವಾದದಲ್ಲಿ ಭಾಗಿಯಾದ ಅಧ್ಯಾಪಕರು, ಸಂಶೋಧನಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಡಾ. ಸಿ.ಜಿ ಬೆಟಸೂರಮಠ ಅವರು ಹಾಗೂ ವೇದಿಕೆ ಮೇಲೆ ಗಣ್ಯರು ಪ್ರಮಾಣ ಪತ್ರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ರೇಚಣ್ಣ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಡಾ. ಶೈಲಾ ನಾಗರಾಜ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹೊನ್ನಶೆಟ್ಟಿ, ಜೆ. ಪುಷ್ಪಲತಾ, ಮ.ಗು.ಸದಾನಂದಯ್ಯ, ಡಾ. ಎಚ್ ಎಸ್ ಲೋಕೇಶಪ್ಪ, ನಂದೀಶ್ವರ್ ಬಿ ಎಸ್ ಅವರು ಉಪಸ್ಥಿತರಿದ್ದರು. ಅಧ್ಯಾಪಕರು,ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು .
.