
ಮೈಸೂರು: ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ, ಆದರೆ ಮುಂದಿನ ದಿನಗಳಲ್ಲಿ ನಪರಿಸ್ಥಿತಿ ಕೈಮೀರಿದರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಭಾನುವಾರ ನಗರದ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಭೇಟಿ ನೀಡಿ, ಅಲ್ಲಿ ದಸರಾಗೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ. ಆದರೆ ಸುಮಾರು ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಕಳೆದ ಏಳು ತಿಂಗಳಿAದ ವಿದ್ಯುತ್ ಕೊರತೆ ಎದುರಾಗಿದೆ. ಬೇರೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ, ಹೇಗೋ ಮ್ಯಾನೇಜ್ ಮಾಡುತ್ತಿದ್ದೇವೆ. ದುಡ್ಡು ಕೊಟ್ಟರೂ ಬೇರೆ ರಾಜ್ಯಗಳಿಂದ ಕೇಳಿದಷ್ಟು ವಿದ್ಯುತ್ ಸಿಗುತ್ತಿಲ್ಲ. ದೇಶಾದ್ಯಂತ ಇದೇ ಸಮಸ್ಯೆ ಇದೆ ಎಂದು ತಿಳಿಸಿದರು.
ಈಗ ಎಲ್ಲೂ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಒಂದು ವಾರದ ಹಿಂದೆ ಸ್ವಲ್ಪ ಸಮಸ್ಯೆಯಾದ ಕಾರಣ ಒಂದೆರೆಡು ದಿನ ಸಮಸ್ಯೆಯಾಗಿತ್ತು. ಕೃಷಿ ಹಾಗೂ ಮನೆ ಬಳಕೆಗೆ ವಿದ್ಯುತ್ ನೀಡುತ್ತಿದ್ದೇವೆ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಪ್ರಕ್ರಿಯೆ ನಿರಂತರವಾಗಿ ಸಾಗಿದೆ. ಉತ್ಪಾದನಾ ಘಟಕಗಳನ್ನು ಹೆಚ್ಚಿಸುವ ಪ್ರಕ್ರಿಯೆಯೂ ಜಾರಿಯಲ್ಲಿದೆ. ದಸರಾಗೆ ಯಾವುದೇ ವಿದ್ಯುತ್ ಕೊರತೆ ಆಗುವುದಿಲ್ಲ ಎಂದು ಹೇಳಿದರು.
ನನಗೆ ಹಿಂದಿನ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಅನುಭವ ಇದೆ. ಆಗಲೂ ಮಾಧ್ಯಮಗಳು ನನ್ನ ಮೇಲೆ ಬಿದ್ದಿದ್ದವು. ಒಂದು ವಿಡಿಯೋ ಹಿಡಿದುಕೊಂಡು ತಿಂಗಳುಗಟ್ಟಲೆ ವರದಿ ಮಾಡಿದ್ದವು. ಸತ್ಯ ಏನೆಂಬುದು ನಂತರ ಗೊತ್ತಾಯಿತು. ಈಗ ಎಇಇ ಪ್ರಕರಣವೂ ಅಷ್ಟೇ. ಸರ್ಕಾರ ಅನುದಾನ ಕೊಡಲಿಲ್ಲ ಎಂದು ಚೀಟಿ ಬರೆದಿಟ್ಟು ಕಣ್ಮರೆಯಾಗಿರುವುದನ್ನು ಹೇಗೆ ನಂಬುತ್ತೀರಾ? ಎಇಇಗೆ ಅಂತಹ ಒತ್ತಡ ಏನಿರುತ್ತದೆ? ಅನುದಾನದ ಒತ್ತಡ ಅವರ ಮೇಲೆ ಯಾಕೆ ಬರಬೇಕು? ಅವರೇನು ಆರ್ಥಿಕ ಇಲಾಖೆ ಅಧಿಕಾರಿನಾ? ಈ ಪ್ರಕರಣದಲ್ಲಿ ಎಲ್ಲಿಂದ ಎಲ್ಲಿಗೆ ಸಂಬAಧಗಳು ಕಾಣುತ್ತಿವೆ ಹೇಳಿ. ಸರ್ಕಾರ ಅವರಿಗೆ ಒತ್ತಡ ತೆಗೆದುಕೊಳ್ಳಿ ಎಂದು ಹೇಳಿತ್ತಾ? ಸುಮ್ಮನೆ ಇದನ್ನು ದೊಡ್ಡದು ಮಾಡಿಕೊಂಡು ಕೂರಬೇಡಿ ಎಂದರು.
ನಾನು ಆ ಇಲಾಖೆಯ ಸಚಿವನಲ್ಲ. ಆ ಇಲಾಖೆಯ ಸಚಿವರು ಈ ಬಗ್ಗೆ ಮಾತನಾಡುತ್ತಾರೆ. ನನಗೆ ನನ್ನದೇ ಆದ ಅನುಭವ ಆದ ಕಾರಣ ಈಗ ಈ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನುಡಿದರು. .
ಮಾಜಿ ಸಿಎಂ ಸಿದ್ದರಾಮಯ್ಯ ದೊಡ್ಡ ನಾಯಕರು. ಅವರು ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತಾರೆ. ಅವರು ಮೌನವಾಗಿದ್ದಾರೆ ಎಂದು ನಿಮಗೆ ಹೇಳಿದವರು ಯಾರು? ಸಮಯ, ಸಂದರ್ಭ ಬಂದಾಗ ಅವರು ಮಾತನಾಡುತ್ತಾರೆ ಎಂದರು.
ಸಿದ್ದರಾಮಯ್ಯ ಜೊತೆಗೆ ಸಿಎಂ ಡಿ.ಕೆ.ಶಿವಕುಮಾರ್ ಚೆನ್ನಾಗಿದ್ದಾರೆ. ಸಿದ್ದರಾಮಯ್ಯನವರ ಎಲ್ಲಾ ಸ್ನೇಹಿತರು ಚೆನ್ನಾಗಿಯೇ ಇದ್ದಾರೆ. ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಎಲ್ಲರೂ ಜೊತೆಯಲ್ಲಿದ್ದರು. ನಾವು ಕಾಂಗ್ರೆಸ್‌ನವರು ಒಂದೇ ಕುಟುಂಬದವರ ರೀತಿ ಇದ್ದೇವೆ.
ನಾನು ಸಿದ್ದರಾಮಯ್ಯ ಅವರಿಗೆ ಮಾತ್ರ ಆತ್ಮೀಯನಲ್ಲ. ಇವತ್ತಿನ ಸಿಎಂ ಅವರಿಗೂ ಆತ್ಮೀಯನೇ. ಹಿಂದೆ ಇದ್ದ ಎಲ್ಲಾ ಸಿಎಂಗಳಿಗೂ ನಾನು ಆತ್ಮೀಯ. ನಾನು ಎಲ್ಲರ ಜೊತೆಯಲ್ಲೂ ಚೆನ್ನಾಗಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.