
ರಾಜಕೀಯ ದುರುದ್ದೇಶದಿಂದ ಪ್ರತಾಪ್ ಸಿಂಹ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲು : ಪಿರಿಯಾಪಟ್ಟಣ ಒಕ್ಕಲಿಗರ ಸಂಘ ಆಕ್ರೋಶ
ಪಿರಿಯಾಪಟ್ಟಣ : ಮಾಜಿ ಸಂಸದ ಪ್ರತಾಪ ಸಿಂಹ ರವರ ಮೇಲೆ ಸರ್ಕಾರ ವಿನಾ ಕಾರಣ ದಲಿತ ದೌರ್ಜನ್ಯ ಪ್ರಕರಣ ದಾಖಲು ಮಾಡುತ್ತಿದೆ ಎಂದು ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಆನಂದ್ ಬಸಲಾಪುರ ಆರೋಪಿಸಿದರು.
ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮಾಜಿ ಸಂಸದ ಪ್ರತಾಪ ಸಿಂಹ ರವರು ಎರಡು ಬಾರಿ ಸಂಸದರಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತನ್ನ ಆಡಳಿತದ ಅವಧಿಯಲ್ಲಿ ಜಾತ್ಯತೀತವಾಗಿ ಪಕ್ಷಾತೀತವಾಗಿ ಪ್ರತಿ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಟಿ. ನರಸೀಪುರ ತಾಲೂಕಿನಲ್ಲಿ ಗಣಪತಿ ವಿಸರ್ಜನ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ರವರ ಅನುಚಿತ ವರ್ತನೆಯನ್ನು ಖಂಡಿಸಿ ಪ್ರತಾಪ್ ಸಿಂಹ ರವರು ಮಾತನಾಡಿರುವ ಹೇಳಿಕೆಯ ಅನುಸಾರ ಸರ್ಕಾರದ ಒತ್ತಡಕ್ಕೆ ಮಣಿದು ಅಲ್ಲಿನ ಪೊಲೀಸ್ ಇಲಾಖೆ ಅಧಿಕಾರಿಗಳು ದಲಿತ ದೌರ್ಜನ್ಯ ಪ್ರಕರಣವನ್ನು ದಾಖಲು ಮಾಡಿರುವುದು ಖಂಡನೀಯವಾಗಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ವಿದ್ದು ತನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮಾಜಿ ಸಂಸದರ ಮೇಲೆ ಈ ರೀತಿ ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿರುವುದು ಬೇಸರದ ಸಂಗತಿಯಾಗಿದೆ ಆದ್ದರಿಂದ ಸರ್ಕಾರ ಕಾನೂನನ್ನು ಅರ್ಥೈಸಿಕೊಂಡು ಪ್ರತಾಪ ಸಿಂಹ ರವರ ಮೇಲೆ ಹಾಕಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಹೇಳಿದರು.ವಕೀಲ ಸಂದೀಪ್ ಮಾತನಾಡಿ ಸಮಾಜದಲ್ಲಿ ಶಾಂತಿಯುತ ಜೀವನ ನಡೆಸಲು ಪ್ರತಿಯೊಬ್ಬರು ಬಾಂಧವ್ಯದಿಂದ ಜೀವಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಅಶಾಂತಿಯ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕು ಮತ್ತು ಸ್ವತಂತ್ರವನ್ನು ಅನುಭವಿಸುತ್ತಾರೆ. ಪ್ರತಾಪ ಸಿಂಹ ರವರು ಕಾನೂನಿನ ಅಡಿಯಲ್ಲಿಯೇ ಪೊಲೀಸ್ ಇನ್ಸ್ಪೆಕ್ಟರ್ ರವರ ವರ್ತನೆಯನ್ನು ಖಂಡಿಸಿದ್ದಾರೆ ವರೆತು ಕಾನೂನು ಹೊರತುಪಡಿಸಿ ಯಾವುದೇ ಅವಾಚ್ಯ ಶಬ್ದಗಳಿಂದ ಮಾತನಾಡಿಲ್ಲ ಇದನ್ನು ಪರಿಗಣಿಸಬೇಕು. ಇವರ ಮೇಲೆ ಮಾಡಿರುವ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದರು.
ಚಂದ್ರೆಗೌಡ ಮಾತನಾಡಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ರವರು ಪ್ರತಾಪ್ ಸಿಂಹ ರವರ ವಿರುದ್ಧ ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿದ್ದಾರೆ ಹಾಗೂ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹುಣಸೆಕುಪ್ಪೆ ಚಂದ್ರೆಗೌಡ, ಕಾರ್ಯದರ್ಶಿ ಮೋಹನ್ ಕಿರಂಗೂರು , ಮನು ಬೆಳ್ತುರು , ಅರುಣ್, ರವಿ, ಕಿರಣ್, ಮನು ಕಗ್ಗುoಡಿ, ಮುತ್ತುರಾಜು, ಲವೆಂದ್ರ ಹಾಜರಿದ್ದರು.