
ಮೈಸೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಅಭಿಯಾನ ಅ. ೩ ರಂದು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿಯ ಪ್ರಜಾಸೇವೆ ಅಭಿಯಾನದಲ್ಲಿ ಮುಖ್ಯಮಂತ್ರಿಗಳು ಖುದ್ದು ಭಾಗವಹಿಸಿ, ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಗಳನ್ನು ಸ್ವೀಕರಿಸಲಿದ್ದಾರೆ. ಇಲಾಖೆ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳನ್ನು ನಿಯೋಜಿಸದೇ ಖುದ್ದು ಹಾಜರಾಗುವಂತೆ ತಿಳಿಸಿದರು.
ಮುಖ್ಯಮಂತ್ರಿಗಳು ಅಭಿಯಾನದಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಸಾರ್ವಜನಿಕರು ಕುಂದುಕೊರತೆ ಆರ್ಜಿ ಸಲ್ಲಿಸುವ ಸಂಭವವಿದೆ. ಸಾರ್ವಜನಿಕರನ್ನು ಸರದಿ ಸಾಲಿನಲ್ಲಿ ಆಗಮಿಸಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಬೇಕು, ಇದಕ್ಕೆ ಟೋಕನ್ ವ್ಯವಸ್ಥೆ ಮಾಡಬೇಕು ಎಂದರು.
ಹೆಚ್ಚಿನ ಸಾರ್ವಜನಿಕರು ಭಾಗವಹಿಸುವ ಹಿನ್ನೆಲೆಯಲ್ಲಿ ಇಲಾಖೆವಾರು ಮಳಿಗೆಗಳನ್ನು ತೆರೆದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಮಳಿಗೆಯಲ್ಲಿ ಅರ್ಜಿ ಸ್ವೀಕರಿಸಲು ಬೇಕಿರುವ ಕಂಪ್ಯೂಟರ್ ಪ್ರಿಂಟರ್ ಸೇರಿದಂತೆ ಇನ್ನಿತರೆ ಸಲಕರಣೆಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾರ್ವಜನಿಕರಿಂದ ಬೆಳಿಗ್ಗೆ ೮ ಗಂಟೆಯಿAದಲೇ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಕೆಲಸವಾಗಬೇಕು ಎಂದರು.
ಜಿಲ್ಲೆಯಲ್ಲಿ ಪ್ರಜಾಸೇವೆ ಅಭಿಯಾನದಲ್ಲಿ ಐ.ಪಿ.ಜಿ.ಆರ್.ಎಸ್ ನಲ್ಲಿ ಸ್ವೀಕೃತವಾಗಿರುವ ಅರ್ಜಿಗಳು ಹಾಗೂ ವಿಲೇವಾರಿಯಾಗಿರುವ ವಿವರವನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅ. ೩ ರಂದು ನಡೆಯಲಿರುವ ಪ್ರಜಾಸೇವಾ ಅಭಿಯಾನದ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಪಿರಿಯಾಪಟ್ಟಣ ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಮೈಸೂರು ಉಪವಿಭಾಗಾಧಿಕಾರಿ ಆಶಪ್ಪ, ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್ ರವಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.