
ಮೈಸೂರು: ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಎಸ್‌ಐಆರ್
ಪ್ರಕ್ರಿಯೆಯನ್ನು ಖಂಡಿಸಿ ಮೈಸೂರು ನಗರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ರೈಲ್ವೆ ನಿಲ್ದಾಣದ ಸಮೀಪವಿರುವ ಬಾಬು ಜಗಜೀವನ್ ರಾಮ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಭಾವಚಿತ್ರವನ್ನು ಹೋಲುವ ಪ್ರತಿಕೃತಿಗೆ ಕೈಗೆ ಬೇಡಿ ತೊಡಿಸುವ ಮೂಲಕ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದ ಚುನಾವಣಾ ಆಯೋಗದ ಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮತದಾನದ ಹಕ್ಕಿನ ಮೇಲೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಯ್ಯದ್ ಅಬ್ರಾರ್, ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ತೆಗೆದುಹಾಕುವ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕಿನ ವಿರುದ್ಧದ ಕ್ರಮ'' ಎಂದು ಆರೋಪಿಸಿದರು. ದೇಶವನ್ನು ಒಡೆಯುವಂತಹ ಕೆಲಸ ನಡೆಯುತ್ತಿದೆ. ನಾವು ಪ್ರತಿಪಕ್ಷವಾಗಿ ಪ್ರತಿ ಕ್ಷೇತ್ರದಲ್ಲೂ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ನಮ್ಮ ರಾಷ್ಟಿçÃಯ ಅಧ್ಯಕ್ಷರ ಸೂಚನೆಯಂತೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಹೇಳಿದರು.
ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕು, “ಅವರು ಜೈಲಿಗೆ ಹೋಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ವಿನೋದ್ ಕುಮಾರ್, ನವೀನ್ ಕೆಂಪಿ, ದಿಲೀಪ್, ಇಮ್ರಾನ್, ಶಶಾಂಕ್, ಶರತ್, ಮನೋಜ್, ಚಂದು, ಉಮೇಶ್, ಇಸ್ಮಾಯಿಲ್, ಬಾಲಾಜಿ, ಆಕಾಶ್, ಮದನ್, ಪ್ರಜ್ವಲ್, ದಕ್ಷಿತ್ ಉಪಸ್ಥಿತರಿದ್ದರು.