
ಕೆ.ಆರ್ ನಗರ; ಕೆ.ಆರ್. ನಗರ ಶಾಸಕರಾದ ಡಿ. ರವಿಶಂಕರ್ ಮತ್ತು ಮೈಸೂರು ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತರೆಡ್ಡಿ ರವರ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ದಸಂಸದ ಮುಖಂಡರುಗಳ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಕೆ.ಆರ್ ನಗರ ಶಾಸಕರಾದ ಡಿ. ರವಿಶಂಕರ್ ರವರು ಮಾತನಾಡಿ ಹಲವಾರು ವರ್ಷಗಳಿಂದ ಅಲೆಮಾರಿ ಸಮುದಾಯಕ್ಕೆ ಸೇರಿದ ಹಲವಾರು ಕುಟುಂಬಗಳು ಮತ್ತು ಇತರೆ ಸಮುದಾಯಕ್ಕೆ ಸೇರಿದ ಬಡ ಕುಟುಂಬಗಳು ಕುಪ್ಪೆ ಸರ್ವೆ ನಂಬರ್ 69 ರ 2-00 ಎಕರೆ ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ಸರಿಯಾದ ಮೂಲಸೌಲಭ್ಯಗಳಿಲ್ಲದೆ ವಾಸ ಮಾಡುತ್ತಾ ಬರುತ್ತಿದ್ದಾರೆ. ಈ ಸಂಬಂಧ ದಸಂಸ ದ ಸಂಘಟನೆ ಮುಖಂಡರುಗಳು ಅನೇಕ ವರ್ಷಗಳಿಂದಲೂ ಈ ನಿರ್ಗತಿಕ ಬಡ ಕುಟುಂಬಗಳಿಗೆ 94 ಸಿಸಿ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿ ವಾಸ ಮಾಡುತ್ತಿರುವ ಮನೆಗಳಿಗೆ ಹಕ್ಕುಪತ್ರ ಕೊಡುವಂತೆ 2022 ರಲ್ಲೇ ಅರ್ಜಿ ಹಾಕಿಕೊಂಡಿರುತ್ತಾರೆ. ಆದರೆ ಈ ಅರ್ಜಿಯನ್ನು ಅಂದಿನ ತಹಸೀಲ್ದಾರ್ ರವರು ಕೂಲಂಕುಶವಾಗಿ ಪರಿಶೀಲಿಸದೇ ವಜಾಗೊಳಿಸಿರುತ್ತಾರೆ. ಇದು ಸರಿಯಾದ ಕ್ರಮವಲ್ಲ. ಈ ಬಡ ಕುಟುಂಬಗಳಿಗೆ ಕಾನೂನುಬದ್ಧವಾಗಿಯೇ ಪುನರ್ ಪರಿಶೀಲಿಸಿ ಯಾವ ಯಾವ ಕುಟುಂಬಗಳು 94 ಸಿಸಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆಯೋ ಅಂತಹ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ಕೊಡುವ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತರೆಡ್ಡಿ ರವರು ಸಾಲಿಗ್ರಾಮ ತಹಸೀಲ್ದಾರ್ ರುಕಿಯಾಬೇಗಂ ರವರಿಂದ ಮಾಹಿತಿ ಪಡೆದುಕೊಂಡು ಈ ಸಂಬಂಧ ಮಾತನಾಡಿ ಯಾವ ಯಾವ ಕುಟುಂಬಗಳು 94 ಸಿಸಿ ಯೋಜನೆಯಡಿ ಸಲ್ಲಿಸಿರುವ ಅರ್ಜಿಗಳು ವಜಾಗೊಂಡಿರುತ್ತದೆಯೋ ಆ ಎಲ್ಲಾ ಅರ್ಜಿಗಳನ್ನು ಫಲಾನುಭವಿಗಳು ಪಡೆದುಕೊಂಡು ಹುಣಸೂರು ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಸೂಚಿಸಿ, ನಂತರದಲ್ಲಿ ಈ ಅರ್ಜಿಗಳನ್ನು ಮರುಪರಿಶೀಲನೆಗೊಂಡು ಆ ಸರ್ಕಾರಿ ಜಾಗವನ್ನು ಕಂದಾಯ ಅಧಿಕಾರಿಗಳು ಮತ್ತು ಸರ್ವೆ ಅಧಿಕಾರಿಗಳಿಂದ ನಿಖರವಾಗಿ ಸರ್ವೆ ಮಾಡಿಸಿ, ಯಾವ ಯಾವ ಜಾಗದಲ್ಲಿ ಈ ಬಡ ಕುಟುಂಬಗಳು ವಾಸ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಂಡು ಉಳಿದ ಖಾಲಿ ಜಾಗವನ್ನೂ ಗುರುತಿಸಲು ತಹಸೀಲ್ದಾರ್ ರವರಿಗೆ ಸೂಚಿಸಿ ಈ ಕಾರ್ಯವು ತ್ವರಿತವಾಗಿ ಆಗಬೇಕು ಎಂದು ಹೇಳಿದರು.
ವರದಿ ಬಂದ ನಂತರ ಈ ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ಕೊಡುವ ವಿಚಾರದಲ್ಲಿ ಶಾಸಕರೊಂದಿಗೆ ಸಭೆ ಮಾಡಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಚುಂಚನಕಟ್ಟೆ ಅಲೆಮಾರಿ ಕುಟುಂಬಗಳ ಹಕ್ಕುಪತ್ರ ವಿಚಾರವಾಗಿ ದಸಂಸ ವು ಕಳೆದ 10 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬರುತ್ತಿದೆ. ಬಡವರ ಹೋರಾಟಕ್ಕೆ ಜಡ್ಡುಗಟ್ಟಿರುವ ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ. ಹಲವಾರು ಅಧಿಕಾರಿಗಳು ಬಂದು ಹೋಗಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ದಿಕ್ಕುದನಿಯಿಲ್ಲದ ಈ ಅಲೆಮಾರಿ ಕಟುಂಬಗಳ ಕತ್ತಲೆಯ ಬದುಕಿಗೆ ಅಧಿಕಾರಿಗಳು ಇಲ್ಲಸಲ್ಲದ ನೆಪವನ್ನು ಹೇಳುತ್ತಾ ಕರ್ತವ್ಯ ಲೋಪವೆಸಗುತ್ತಿದ್ದಾರೆ. ಎಲ್ಲಾ ಎಸ್.ಸಿ /ಎಸ್ ಟಿ ಸಭೆಗಳು ಇತರೆ ಸಭೆಗಳಲ್ಲೂ ದಸಂಸ ವು ಈ ಸಂಬಂಧ ಮನವಿ ಮಾಡುತ್ತಾ ಬರುತ್ತಿದ್ದರೂ ಈ ಬಡ ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ.
ದಸಂಸ ವು ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತದೆ. ಕೆ.ಆರ್ ನಗರ ಶಾಸಕರಾದ ಡಿ. ರವಿಶಂಕರ್ ರವರು ಆಸಕ್ತಿ ವಹಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಸಂಬಂಧ ಸಭೆ ನಡೆಸುತ್ತಿರುವುದು ಒಂದು ರೀತಿಯ ಆಶಾದಾಯಕವಾಗಿದೆ. ಈ ಸಭೆಯ ಮುಖೇನವಾದರೂ ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳಿದೇ ಚುಂಚನಕಟ್ಟೆ ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡಿ ಘನತೆ, ಗೌರವದಿಂದ ಬದುಕಲು ಅವಕಾಶ ಮಾಡಿಕೊಡಬೇಕು. ತಪ್ಪಿದರೆ ದಸಂಸ ವು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅನಿರ್ದಿಷ್ಟಾವಧಿಯವರೆಗೂ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಆಗಲಿದೆ ಎಂದರು.
ಈ ಸಭೆಯಲ್ಲಿ ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ, ಕೆ.ಆರ್ ನಗರ ತಹಸೀಲ್ದಾರ್ ಸುರೇಂದ್ರ ಮೂರ್ತಿ, ದಸಂಸ ದ ಜಿಲ್ಲಾ ಸಂಚಾಲಕರಾದ ಹೆಚ್. ಬಿ ದಿವಾಕರ್, ಮುಂತಾದವರು ಹಾಜರಿದ್ದರು.