
ನಂಜನಗೂಡು ; ರಾಜ್ಯದಲ್ಲಿ ೨೧೭ ತಾಲೂಕು ಬರಗಾಲಕ್ಕೆ ತುತ್ತಾಗಿವೆ. ೧೯ ಲಕ್ಷ ಹೆಕ್ಬೇರ್ ಬೆಳೆನಾಶ. ೨೦ ಸಾವಿರ ಕೋಟಿ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆದ್ದರಿಂದ ಸರ್ಕಾರ ನ್ಯಾಯಯುತ ಪರಿಹಾರ ನೀಡಬೇಕು ಎಂದು ಅ.೧೨ ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ರೈತರ ಕೃಷಿ ಸಾಲ ಮನ್ನಾ ಆಗಬೇಕು ಗ್ರಾಮೀಣ ರೈತ ಮಹಿಳೆಯರು ಖಾಸಗಿ ಫೈನಾನ್ಸ್ ಗಳಲ್ಲಿ ವಾರ ಹಾಗು ತಿಂಗಳು ಸಾಲ ಮರುಪಾವತಿ ತೆಗೆದುಕೊಂಡಿರುವುದನ್ನು ಎರಡು ವರ್ಷ ಸಾಲ ವಸೂಲಾತಿ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬರಗಾಲದ ರೈತರಿಗೆ ಎಕ್ರೆಗೆ ೨೫,೦೦೦ ಪರಿಹಾರ ಕೂಡಲೇ ನೀಡಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ವಿದ್ಯುತ್ ಸಮಸ್ಯೆ ತಪ್ಪಿಸಬೇಕು. ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ ಕಬ್ಬಿನ ಎಫ್‌ಆರ್‌ಪಿ ದರ ಕೇಂದ್ರ ಸರ್ಕಾರ ಏರಿಕೆ ಮಾಡಬೇಕು, ರಾಜ್ಯ ಸರ್ಕಾರ ಕಬ್ಬಿನ ಎಸ್ ಎ ಪಿ ದರ ತಮಿಳುನಾಡಿನ ಮಾದರಿಯಲ್ಲಿ ಟನ್‌ಗೆ ೮೦೦ರೂ ಏರಿಕೆ ಮಾಡಬೇಕು ಎಂಬ ಒತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ೧೨ ರಂದು ಸೋಮವಾರ ೧೧ ಗಂಟೆಗೆ ರಾಜ್ಯದ ರೈತರಿಂದ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಸಂಘದ ನಂಜನಗೂಡು ತಾಲೂಕು ಅಧ್ಯಕ್ಷ ದೇವನೂರು ವಿಜಯೇಂದ್ರ, ಪಿ. ಸೋಮಶೇಖರ್, ಅಂಬಳೆ ಮಂಜುನಾಥ್, ಗುರುಮೂರ್ತಿ, ಶಿವಶಂಕರ್ ಮಾಸ್ಟರ್, ಮಾದೇವಪ್ಪ ತಗಡೂರು,
ಹಲರೆ ಮಾದೇವ ನಾಯಕ್, ಚೆನ್ನಪ್ಪ, ಮಲ್ಲೇಶ, ಗಿರೀಶ್, ಅಳಗಂಚಿ ಮಹೇಂದ್ರ, ಉಮೇಶ್ ಡಿ.ಜಿ, ಚಿನ್ನಂಬಳ್ಳಿ ಪುಟ್ಟಬುದ್ಧಿ, ನಾಗೇಂದ್ರಸ್ವಾಮಿ, ರೇವಣ್ಣ ಮುಂತಾದವರು ಹಾಜರಿದ್ದರು.