
ಮೈಸೂರು: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಅ. ೨೬ ರಂದು ನಗರದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ತಿಳಿಸಿದರು.
ಗುರುವಾರ ನಗರದ ಅಪರ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ ಎಂದರು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ. ೨೬.ರಂದು ಬೆಳಗ್ಗೆ ೧೨ ಗಂಟೆಗೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವೇದಿಕೆ ಮೇಲೆ ಗೀತಾ ಗಾಯನ ಏರ್ಪಡಿಸಲಾಗುವುದು. ಸಮುದಾಯದ ಮುಖಂಡರ ಸಲಹೆಯಂತೆ ದಿವ್ಯ ಸಾನಿಧ್ಯ ಹಾಗೂ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಲಾಗುವುದು ಎಂದರು.
ಮಹರ್ಷಿ ವಾಲ್ಮೀಕಿಯವರು ಶ್ರೀರಾಮನ ಜೀವನವನ್ನು ಆಧಾರವಾಗಿಟ್ಟುಕೊಂಡು ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಒಬ್ಬ ಮನುಷ್ಯನು ತನ್ನ ಜೀವನವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಶ್ರೀರಾಮನ ಜೀವನವೇ ಅತ್ಯುತ್ತಮ ನಿದರ್ಶನ. ಅಂತಹ ಶ್ರೇಷ್ಠ ಮಹರ್ಷಿಗಳ ಜಯಂತಿಯನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ಆಚರಿಸೋಣ ಎಂದು ತಿಳಿಸಿದರು.
ಜಯಂತಿ ನಡೆಯುವ ಸ್ಥಳದ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ, ಹಾಗೂ ಶಾಮಿಯಾನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಮಾಡಬೇಕು. ವಿವಿಧ ಜಯಂತಿಗಳ ಆಚರಣೆ ಮಾಡುವಾಗ ಮೈಸೂರು ನಗರದಲ್ಲಿ ಇರುವ ಎಲ್ಲಾ ಮಹನೀಯರ ಪ್ರತಿಮೆಗಳನ್ನು ಮಹಾನಗರ ಪಾಲಿಕೆಯ ವತಿಯಿಂದ ಸ್ವಚ್ಛ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಯಾದ ಎಂ.ಕೆ ಮಲ್ಲೇಶ್ ಮಾತನಾಡಿ, ಜಯಂತಿಗಳ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳಿಗೆ ಮುಖಂಡರಿಗೆ ಆಹ್ವಾನ ನೀಡಲಾಗುವುದು. ಅ. ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಸಾಂಸ್ಕöÈತಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ವಿವಿಧ ಕಲಾತಂಡಗಳು, ಅಲಂಕೃತ ರಥ ಹಾಗೂ ಪೊಲೀಸ್ ಬ್ಯಾಂಡ್ಗಳು ವಿಶೇಷ ಮೆರುಗು ನೀಡಲಿವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ಒಬ್ಬ ವಿದ್ಯಾರ್ಥಿಗೆ ೧ ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಅದರೊಂದಿಗೆ, ಬುಡಕಟ್ಟು ಕ್ಷೇಮಾಭಿವೃದ್ಧಿ ಇಲಾಖೆಯ ವಸತಿ ಶಾಲೆಗಳಲ್ಲಿ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ೫ ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.