
ಪಿರಿಯಾಪಟ್ಟಣ : ತಾಲೂಕಿನ ಚಾಮರಾಯನಕೋಟೆ ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಸಮುದಾಯದ ಗೌರಿ ಕುಟುಂಬದವರು ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿ ದೇವಿ ಮತ್ತು ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ಸಾವಿರರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸುಮಾರು 27 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ. ಮಹಾಲಯ ಅಮಾವಾಸ್ಯೆಗೆ ಮೂರು ದಿನಗಳು ಬಾಕಿ ಇರುವಾಗ ದೇವಿಯ ವಿಗ್ರಹವನ್ನು ವಿಸರ್ಜಿಸುವ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ಗ್ರಾಮದ ಶಿಲ್ಪಿಗಳಾದ ಸಿ.ಟಿ. ನಾಗರಾಜು ಮತ್ತು ಮಂಜುನಾಥ್ ಅವರು ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಸ್ವತಃ ಕೆತ್ತಿ ನಿರ್ಮಿಸಿರುವುದು ಆಚರಣೆಯ ಮತ್ತೊಂದು ವಿಶೇಷತೆಯಾಗಿದೆ.
ಆರ್ಚಕ ಸುಬ್ರಮಣ್ಯ ಅವರ ನೇತೃತ್ವದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜಾ ಕೈಂಕರ್ಯ ಹಾಗೂ ಮಹಾಮಂಗಳಾರತಿ ನೆರವೇರಿತು. ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು. ಗುರುವಾರ ಬೆಳಗ್ಗೆ ಸ್ವರ್ಣಗೌರಿ ಹಾಗೂ ಗಣೇಶ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ವೀರಗಾಸೆ ಹಾಗೂ ಚಂಡೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಕಾವೇರಿ ನದಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ವಿಶ್ವಕರ್ಮ ಸಮುದಾಯದ ಭಕ್ತರು ಗ್ರಾಮಸ್ಥರ ಸಹಕಾರದೊಂದಿಗೆ ಹಲವು ವರ್ಷಗಳಿಂದ ಸ್ವರ್ಣಗೌರಿ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ದೇವಿಯ ಅನುಗ್ರಹದಿಂದ ನಾಡಿನಲ್ಲಿ ಸಕಾಲಕ್ಕೆ ಮಳೆ ಸುರಿದು, ಉತ್ತಮ ಬೆಳೆ ಬಂದು ರೈತರು ಸಮೃದ್ಧಿಯಾಗಲಿ ಎಂದು ಆಶಿಸಿದರು.
ಆರ್ಚಕ ಸುಬ್ರಮಣ್ಯ ಮಾತನಾಡಿ, ಸುಮಾರು 800 ವರ್ಷಗಳಿಂದ ನಮ್ಮ ಪೂರ್ವಜರು ಸ್ವರ್ಣಗೌರಿ ವ್ರತವನ್ನು ಆಚರಿಸಿಕೊಂಡು ಬಂದಿದ್ದಾರೆ. ದೇವಿಯನ್ನು ನಂಬಿ ಬೇಡಿಕೊಂಡವರಿಗೆ ಕರುಣಿಸುವ ಮಹಾತಾಯಿಯಾಗಿ ಸ್ವರ್ಣಗೌರಿ ಆರಾಧಿಸಲ್ಪಡುತ್ತಾಳೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ದೇಗುಲದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿ.ಟಿ. ನಾಗರಾಜು, ಮಂಜುನಾಥ್, ಸಿ.ಎಸ್. ಕುಮಾರ, ಯೋಗೇಶ್, ಈಶ್ವರಚಾರ್, ಸಿ.ಎಂ. ಮಹೇಶ್, ದೇವರಾಜು, ಸಿ.ಪಿ. ಮಂಜು, ಹರೀಶ್, ಲೋಕೇಶ್, ಸಿ.ಜಿ. ನಟರಾಜು, ಮೋಹನ್, ಸಂಜಯ್, ಸಾಗರ್, ಸ್ವಾಮಚಾರಿ, ಮಲ್ಲೇಶಚಾರಿ, ಪ್ರಕಾಶಚಾರಿ ಸೇರಿದಂತೆ ಗೌರಿ ಕುಟುಂಬದವರು ಹಾಗೂ ಗ್ರಾಮಸ್ಥರು ಇದ್ದರು.