Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಮಾಜದ ಪ್ರಗತಿಗೆ ನೆರವಾಗುತ್ತಿರುವ ಪತ್ರಕರ್ತರ ಸೇವೆ ಅಮೂಲ್ಯವಾದುದು ; ಶಾಸಕ ದರ್ಶನ್‌ ಧ್ರುವನಾರಾಯಣ

ನಂಜನಗೂಡು;

ಸಮಾಜದಲ್ಲಿ ಕಂಡು ಬರುವ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ಜನರ ಸಮಸ್ಯೆಗಳಿಗೆ ದ್ವನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಪ್ರಗತಿಗೆ ನೆರವಾಗುತ್ತಿರುವ ಪತ್ರಕರ್ತರ ಸೇವೆ ಅಮೂಲ್ಯವಾದುದು ಎಂದು ಶಾಸಕ ದರ್ಶನ್‌ ಧ್ರುವನಾರಾಯಣ ಹೇಳಿದರು. 

   ಅವರು ಶುಕ್ರವಾರ ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜೆಎಸ್‌ಎಸ್‌ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಗಾಟನೆ ನೆರವೇರಿಸಿ ಮಾತನಾಡಿದರು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಪತ್ರಿಕಾ ರಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಸತ್ಯ,ನಿಷ್ಟೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಆಧಾರವಾಗಿಟ್ಟುಕೊಂಡು ಪತ್ರಕರ್ತರು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಎಐ ಆಧಾರಿತ ವರದಿಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲೂ ಸಂಚಲನ ಸೃಷ್ಟಿಯಾಗಿದ್ದರೂ ತಳ ಹಂತದಲ್ಲಿ ನೇರ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರು ನೀಡುವ ವರದಿಗಳು ನೈಜತೆಯನ್ನು ಧೃಢೀಕರಿಸುವುದರಿಂದ ಪತ್ರಕರ್ತರ ಪಾತ್ರ ಸದಾ ಕಾಲಕ್ಕೂ ಪ್ರಸ್ತುತವಾಗಿದೆ. ಇನ್ನು ನಂಜನಗೂಡು ತಾಲೂಕು ಪತ್ರಕರ್ತರ ಭವನಕ್ಕೆ ಮುಂದುವರೆದ ಕಾಮಗಾರಿಯನ್ನು ಕೈಗೊಳ್ಳಲು ೧೫ ಲಕ್ಷರೂಗಳ ಅನುದಾನವನ್ನು ಸ್ಥಳೀಯ ಶಾಸಕರ ಅನುದಾನದಿಂದ ನೀಡಲಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಉಳಿದಂತೆ ಪತ್ರಕರ್ತರಿಗೆ ನಿವೇಶನ ನೀಡುವ ಸಂಬಂಧ ತಾಲೂಕು ಪತ್ರಕರ್ತರ ಸಂಘದೊಡನೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ನಗರಸಭೆ ಅಧಿಕಾರಿಗಳೊಡನೆ ಮಾತುಕತೆ ನಡೆಸಿ ಪತ್ರಕರ್ತರಿಗೆ ಆರೋಗ್ಯ ವಿಮೆ ಕೊಡಿಸಲು ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯ ಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್‌ ಉತ್ತಪ್ಪ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ ಎಂದು ಗುರ್ತಿಸಿಕೊಂಡಿರುವ ಮಾಧ್ಯಮ ಕ್ಷೇತ್ರ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಣೆ ಮಾಡುವಂತೆ ಸಮಾಜ ನೋಡಿಕೊಳ್ಳಬೇಕಿದ್ದು ಪತ್ರಿಕೆಗಳು ಅಳಿವಿನಂಚಿಗೆ ತಲುಪಿದಲ್ಲಿ ಸಮಾಜದ ಅಸ್ಥಿತ್ವಕ್ಕೆ ಧಕ್ಕೆಯಾಗುವುದು ನಿಶ್ಚಿತ ಸತ್ವಪೂರ್ಣ ಸಮಾಜ ನಿರ್ಮಾಣವಾಗಬೇಕಿದ್ದಲ್ಲಿ ಮಾಧ್ಯಮ ಕ್ಷೇತ್ರವನ್ನು ಬಲಪಡಿಸುವುದು ಅನಿವಾರ್ಯ ಎಂಬ ಸತ್ಯವನ್ನು ಅರಿತುಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣಗಳು ಮನರಂಜನೆಯ ಜೊತೆಗೆ ಸುದ್ದಿ ಮಾಹಿತಿಗಳನ್ನು ನೀಡುತ್ತಿದ್ದರೂ ವಾಸ್ತವ ಸತ್ಯಾಂಶದ ವರದಿಯನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೇ ನೀಡುವುದರಿಂದ ಓದುಗರು ವಿಶ್ವಾಸಾರ್ಹ ಸುದ್ದಿಗಳಿಗೆ ಪತ್ರಿಕೆಗಳ ಮೇಲೇ ಅವಲಂಭನೆಯಾಗುತ್ತಾರೆ ಹೀಗಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ಭವಿಷ್ಯದಲ್ಲಿಯೂ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಜನರ ವಿಶ್ವಾಸ ಮುಂದುವರೆಯಲಿದೆ ಎಂದು ಹೇಳಿದರು. ಇನ್ನು ಪತ್ರಕರ್ತರ ಸಾಮಾಜಿಕ ಸ್ಥಿತಿಯ ಸುಧಾರಣೆಗೋಸ್ಕರ ಚುನಾಯಿತ ಜನಪ್ರತಿನಿಧಿಗಳು ನೆರವಾಗಬೇಕಿದೆ ಎಂದು ತಿಳಿಸಿದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ವೈದ್ಯಕೀಯ ವಿಭಾಗದ ನಿರ್ದೇಶಕ ಆರ್‌.ಮಹೇಶ್‌ ಮಾತನಾಡಿ, ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ಮಾಧ್ಯಮ ಕ್ಷೇತ್ರದ ಅರ್ಹ ಪತ್ರಕರ್ತರನ್ನು ಗುರ್ತಿಸಿ ಪ್ರತೀವರ್ಷ ಸುತ್ತೂರು ಶ್ರೀ ವೀರಸಿಂಹಾಸನಾ ಮಹಾ ಸಂಸ್ಥಾನ ಮಠದಿಂದ ಜೆಎಸ್‌ಎಸ್‌ ಮಾಧ್ಯಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಂಜನಗೂಡು ತಾಲೂಕಿನ ತಾಂಡವಪುರದ ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜು ಅವರಿಗೆ ಜೆಎಸ್‌ಎಸ್‌ ಮಾದ್ಯಮ ಪ್ರಶಸ್ತಿಯೊಂದಿಗೆ ೧೦ ಸಾವಿರ ರೂಗಳ ಚೆಕ್‌ ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಸಭೆಯನ್ನುದ್ಧೇಶಿಸಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೀಪಕ್‌, ಪ್ರದಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ತಾಲೂಕು ಅಧ್ಯಕ್ಷ ಹೆಚ್‌.ಡಿ.ರಂಗಸ್ವಾಮಿ, ಮಾತನಾಡಿದರು. 

  ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹುಲ್ಲಹಳ್ಳಿ ಮೋಹನ್‌, ಜೆಎಸ್‌ಎಸ್‌ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಟಿ.ಕೆ.ಬಸವರಾಜು, ತಾಲೂಕು ಸಂಘದ ಕಾರ್ಯದರ್ಶಿ ಎನ್.ಪಿ.ದೀಪಕ್‌, ಉಪಾಧ್ಯಕ್ಷ ವೇಣುಗೋಪಾಲ್‌, ಖಚಾಂಚಿ ಭಾಗ್ಯರಾಜ್‌, ಕಾರ್ಯಕಾರಿ ಸದಸ್ಯರಾದ ನಂಜನಗೂಡು ಮಧು, ಪ್ರಕಾಶ್, ಕೆಂಪೇಗೌಡ, ಟಿ.ಶ್ರೀನಿವಾಸ್, ಪ್ರತಾಪ್. ಟಿ. ಕೊಡಿನರಸೀಪುರ, ಯಡಿಯಾಲ ಮಹದೇವಸ್ವಾಮಿ, ಹುರ ಕೃಷ್ಣಪ್ಪಗೌಡ, ಸದಸ್ಯರಾದ ಬಸವರಾಜು, ರಾಘವೇಂದ್ರ, ಮಹಾದೇವಸ್ವಾಮಿ ಪಟೇಲ್, ಗಂಗಾಧರ್, ಚಿನ್ನಸ್ವಾಮಿ, ಸಿದ್ದಪ್ಪಾಜಿ, ನಂಜುಂಡ ನಾಯಕ, ಮಹದೇವ, ಸಮಾಜ ಸೇವಕರಾದ ಯು.ಎನ್.ಪದ್ಮನಾಭರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಕೆಜಿ ಮಹೇಶ್, ಸಿ.ಎಂ.ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್ .ಆರ್. ಕೃಷ್ಣಪ್ಪಗೌಡ, ಕುರಿಹುಂಡಿ ರಾಜು ಮೊದಲಾದವರು ಭಾಗವಹಿಸಿದ್ದರು.

ಚಿತ್ರ(1) ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಟಿ.ಕೆ.ಬಸವರಾಜು ಅವರಿಗೆ ಜೆಎಸ್‌ಎಸ್‌ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.