
ಅರಮನೆ ಆವರಣದಲ್ಲಿ ಜಂಬೂ ಸವಾರಿ ತಾಲೀಮು
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನ ನಡೆಯುವ ಐತಿಹಾಸಿಕ ಜಂಬೂಸವಾರಿಗೆ ಸಿದ್ಧತೆಗಳು ಕೊನೆ ಹಂತ ತಲುಪಿವೆ. ಈಗಾಗಲೇ ಎಲ್ಲಾ ಹಂತದ ತಾಲೀಮುನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವ ದಸರಾ ಗಜಪಡೆಗೆ ಭಾನುವಾರ ಜಂಬೂಸವಾರಿಯ ತಾಲೀಮು ನಡೆಸಲಾಯಿತು. ಅ.21 ರಂದು ನಡೆಯಲಿರುವ ವಿಜಯದಶಮಿ ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಗಜಪಡೆಯ ತಾಲೀಮು ನಡೆಯಿತು.
ಅರಮನೆ ಆವರಣದಲ್ಲಿ ಹಾಕಲಾಗಿರುವ ತಾತ್ಕಾಲಿಕ ವೇದಿಕೆಯಲ್ಲಿ ನಿಂತ ಸಿಸಿಎಫ್ ರವಿಶಂಕರ್, ಡಿಸಿಎಫ್ ಪ್ರಭುಗೌಡ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಗಜಪಡೆಯ ಕ್ಯಾಪ್ಟನ್ ಪ್ರಶಾಂತ ತನ್ನ ಕುಮ್ಕಿ ಆನೆಗಳೊಂದಿಗೆ ವೇದಿಕೆಯ ಮುಂಭಾಗಕ್ಕೆ ಬರುತ್ತಿದ್ದಂತೆ ಪ್ರಶಾಂತನಿಗೆ ಪುಷ್ಪಾರ್ಚನೆ ಮಾಡಿದರು. ಪ್ರಶಾಂತ ಸೊಂಡಿಲೆನ್ನು ಮೇಲೆತ್ತಿ ವೇದಿಕೆ ಮೇಲಿದ್ದ ಗಣ್ಯರಿಗೆ ಸೆಲ್ಯೂಟ್ ಮಾಡಿದ. ತಾಲೀಮು ಯಶಸ್ವಿಯಾದ ಬಳಿಕ ಅಲ್ಲಿಂದ ತೆರಳಿದ. ಬಳಿಕ ನಗರ ಪೊಲೀಸ್ ಆಯಕ್ತರು, ಡಿಸಿಪಿಗಳು ಜಂಬೂಸವಾರಿ ಉದ್ಘಾಟನೆಯಂದು ಕೈಗೊಂಡಿರುವ ಭದ್ರತೆಗಳನ್ನು ಪರಿಶೀಲಿಸಿದರು.
