
ಮೈಸೂರು: ನಗರದಲ್ಲಿರುವ ವಿಶ್ವ ಪ್ರಸಿದ್ಧ ಅಂಬಾ ವಿಲಾಸ ಅರಮನೆಯಲ್ಲಿ ಮಂಗಳವಾರ ರಾಜ ಮನೆತನದವರು ಆಯುಧಗಳ ಪೂಜೆ ಸಂಬ್ರಮದಿAದ ನೆರವೇರಿಸಿದರು.
ಇಂದು ಬೆಳಗ್ಗೆ 11:32 ರಿಂದ 11:52ರಲ್ಲಿ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವಂಶದ ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಿದರು. ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳಿಗೂ ಪೂಜೆ ಮಾಡಲಾಯಿತು.
ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಸೇರಿ ರಾಜ ಮನೆತನದವರು ಬಳಸುತ್ತಿರುವ ವಾಹನಗಳು, ಅರಮನೆಯ ಕತ್ತಿ, ಈಟಿ, ಗುರಾಣಿ, ಸೇರಿದಂತೆ ಅರಮನೆಯ ಆಯುಧಗಳಿಗೆ ಹಾಗೂ ಜಂಬೂ ಸವಾರಿಯ ದಿನ ಕುಶಾಲ ತೋಪು ಸಿಡಿಸಲು ಬಳಸುವ ಫಿರಂಗಿ ಗಾಡಿಗಳಿಗೂ ಪೂಜೆ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಮಹಾನವಮಿ ಪ್ರಯುಕ್ತ ಅರಮನೆಯಲ್ಲಿ ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ ನೆರವೇರಿತು. ಬಳಿಕ ಬೆಳಗ್ಗೆ 6:30ಕ್ಕೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಅರಮನೆಯಿಂದ ತಂದ ಆಯುಧಗಳಿಗೆ ಎಣ್ಣೆ ಶಾಸ್ತç ನಡೆಯಿತು. ಅರಮನೆಯ ಆನೆ ಬಾಗಿಲಿನ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆಗಮಿಸಿ, ಖಾಸಾ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಸ್ವಚ್ಛಗೊಳಿಸಲಾಯಿತು. ಬಳಿಕ ಪಟ್ಟದ ಆನೆ ಶ್ರೀಕಂಠ, ಅರಮನೆ ನಿಶಾನೆ ಏಕಲವ್ಯ, ಪಟ್ಟದ ಕುದುರೆ, ಪಟ್ಟದ ಹಸು ಹಾಗೂ ಆಯುಧಗಳಿಗೆ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪೂಜೆ ಸಲ್ಲಿಸಿ, ಬೆ:ಗ್ಗೆ 8:30ರಿಂದ 8:50ರೊಳಗೆ ಮಂಗಲ ವಾದ್ಯಗಳೊಂದಿಗೆ ಅರಮನೆಗೆ ಕರೆದುಕೊಂಡು ಬರಲಾಯಿತು.
ಅರಮನೆಯಲ್ಲಿನ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನು ತಂದು ಅವುಗಳ ಜೋಡಿಸಲಾಯಿತು. ಬೆಳಗ್ಗೆ 9:15ಕ್ಕೆ ಚಂಡಿ ಹೋಮ ಪೂರ್ಣಾಹುತಿ ನಡೆಯಿತು. ನಂತರ ಮಹಾರಾಜ ಯದುವೀರ್ ಒಡೆಯರ್ ಅವರು ಕಲ್ಯಾಣಮಂಟಪದಲ್ಲಿ ರಾಜ ಪರಂಪರೆಯ ಸಂಪ್ರದಾಯದAತೆ ಆಯುಧ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಇಬ್ಬರು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದರು.
ಎರಡು ದಿನ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧ : ಆಯುಧ ಪೂಜೆ, ಮಹಾನವಮಿ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುವ ಕಾರಣ ಅರಮನೆ ವೀಕ್ಷಣೆ ಇರುವುದಿಲ್ಲ.
