
ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿ ಶನಿವಾರ ಭಕ್ತಸಾಗರದ ಸಮ್ಮುಖದಲ್ಲಿ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ರಥೋತ್ಸವು ಅದ್ದೂರಿಯಾಗಿ ಜರುಗಿತು.
ಮುಂಜಾನೆಯಿAದಲೇ ಚಾಮುಂಡಿ ಬೆಟ್ಟದಲ್ಲಿ ದಟ್ಟ ಮಂಜು ಮತ್ತು ತುಂತುರು ಮಳೆ ಆವರಿಸಿತ್ತು,ಆದರೂ ಮಳೆ-ಮಂಜಿನ ನಡುವೆಯೂ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ, ರಥೋತ್ಸವದಲ್ಲಿ ಭಾಗಿಯಾದರು.
ಹೂವು, ಬಣ್ಣದ ಬಾವುಟಗಳಿಂದ ಸಿಂಗರಿಸಿದ್ದ ರಥ ದೇವಸ್ಥಾನದ ನೂರಾರು ಅಡಿ ಎತ್ತರದ ಗೋಪುರದ ಹಿನ್ನೆಲೆಯಲ್ಲಿ ಕಣ್ಮನ ಸೆಳೆಯಿತು.
ವಿವಿಧ ಆಭರಣ, ಹೂಗಳಿಂದ ಸರ್ವಾಲಂಕಾರ ಭೂಷಿತೆಯಾಗಿ ರಥದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಚಾಮುಂಡೇಶ್ವರಿಯ ರಥವನ್ನು ಎಳೆದು ಭಕ್ತರು ಪುನೀತರಾದರು.
ರಥೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ನಾಲ್ಕು ಗಂಟೆಯಿAದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ತಾಯಿಗೆ ಸಿಂಹವಾಹಿನಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಚಾಮುಂಡಿ ಬೆಟ್ಟದ ಪ್ರಧಾನ ಆಗಮಿಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಬೆಳಗ್ಗೆ ೭.೫೫ರಿಂದ ೮.೧೫ರೊಳಗೆ ಸಲ್ಲುವ ಶುಭ ಮುಹೂರ್ಥದಲ್ಲಿ ರಥೋತ್ಸವ ಆರಂಭವಾಯಿತು. ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ದಿವ್ಯ ರಥಾರೋಹಣ ಆಗುತ್ತಿದ್ದಂತೆ ರಾಜ ವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ರಥದ ಹಗ್ಗವನ್ನು ಹಿಡಿದು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ, ಅದ್ಯಾವೀರ ಒಡೆಯರ್ ಸೇರಿದಂತೆ ರಾಜಮನೆತನದವರು ಇದ್ದರು.
ಚಾಮುಂಡೇಶ್ವರಿದೇವಿಯ ಉತ್ಸವಮೂರ್ತಿಯುಳ್ಳ ರಥೋತ್ಸವ ಆರಂಭವಾಗುತ್ತಿದ್ದAತೆ ಪೊಲೀಸರು ಸಂಪ್ರದಾಯದAತೆ ೨೧ ಕುಶಾಲುತೋಪು ಸಿಡಿಸಿ, ತಾಯಿ ಚಾಮುಂಡೇಶ್ವರಿ ದೇವಿಗೆ ಗೌರವ ಸಲ್ಲಿಸಿದರು. ತೇರು ದೇವಸ್ಥಾನವನ್ನು ಒಂದು ಸುತ್ತು ಸಾಗಿ ಬಂತು. ಶುಕ್ರವಾರ ರಾತ್ರಿ ಆರಂಭವಾದ ಮಳೆ ರಾತ್ರಿಯಿಡೀ ಸುರಿದಿದ್ದಲ್ಲದೇ ಶನಿವಾರ ಮುಂಜಾನೆಯೂ ಸುರಿಯಿತು. ಮಳೆಯ ನಡುವೆಯೂ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಲ್ಲದೇ ದೇವಸ್ಥಾನದ ಸುತ್ತ ನೆರೆದು ರಥಕ್ಕೆ ಹಣ್ಣು-ದವನ ಎಸೆದು ಚಾಮುಂಡೇಶ್ವರಿ ತಾಯಿಗೆ ಜೈಕಾರ ಹಾಕಿ, ರಥ ಎಳೆದು ಪುನೀತರಾದರು. ರಥೋತ್ಸವಕ್ಕೆ ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು ಮೆರುಗು ನೀಡಿದವು.
ಬಳಿಕ ಚಾಮುಂಡೇಶ್ವರಿ ತಾಯಿಯ ಮೂಲ ಮೂರ್ತಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಯಿತು.
ಹರಿದು ಬಂದ ಭಕ್ತಸಾಗರ, ನೂಕುನುಗ್ಗಲು: ಮಳೆಯ ನಡುವೆಯೂ ಅದ್ದೂರಿಯಾಗಿ ನಡೆದ ರಥೋತ್ಸವ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಟ್ಟಕ್ಕೆ ಬೆಳಗ್ಗೆಯಿಂದಲೇ ಭಕ್ತರು ಗುಂಪು, ಗುಂಪಾಗಿ ಬಂದು ಸೇರಿದ್ದರು. ಬೆಟ್ಟದ ಸುತ್ತಲಿನ ಗ್ರಾಮಗಳಾದ ಆಲನಹಳ್ಳಿ, ಲಲಿತಾದ್ರಿಪುರ, ಉತ್ತನಹಳ್ಳಿ, ಹೊಸಹುಂಡಿ, ಬಂಡಿಪಾಳ್ಯ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಚಾಮುಂಡಿಬೆಟ್ಟದಲ್ಲಿ ರಥೋತ್ಸವದ ಸಂಭ್ರಮ ಮೇಳೈಸಿತ್ತು. ದಸರಾದ ಕೊನೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ಆಶ್ವಯುಜ ಮಾಸದಲ್ಲಿ ಪ್ರತಿ ವರ್ಷ ಈ ರಥೋತ್ಸವ ನಡೆಯುತ್ತದೆ. ರಥೋತ್ಸವದ ವೇಳೆ ಪೊಲೀಸ್ ಬ್ಯಾಂಡ್ ತಂಡದಿAದ ಆಕರ್ಷಕ ವಾದ್ಯ ಪ್ರದರ್ಶನ ನಡೆಯಿತು. ರಥೋತ್ಸವ ವೇಳೆ ಪೊಲೀಸರು ಸಿಡಿಮದ್ದು ಸಿಡಿಸಿದರು.
ಮಳೆ-ಮಂಜಿನ ನಡುವೆಯೂ ಭಕ್ತರು ಮೊಬೈಲ್ ನಲ್ಲಿ ರಥದ ಫೋಟೋ, ವಿಡಿಯೋ ಸೆರೆಹಿಡಿದು “ಜೈ ಚಾಮುಂಡೇಶ್ವರಿ” ಘೋಷಣೆ ಕೂಗಿ ಸಂಭ್ರಮಿಸಿ ಪುನೀತರಾದರು.
ರಥೋತ್ಸವದ ಪ್ರಯುಕ್ತ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿತ್ತು. ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಈ ನಡುವೆಯೇ ಭಕ್ತರು ಬೆಳಗಿನ ಪೂಜೆಯಲ್ಲಿ ಭಾಗವಹಿಸಿ, ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಸಂಜೆ ಸಿಂಹವಾಹನೋತ್ಸವ, ಹಂಸವಾಹನೋತ್ಸವ ಹಾಗೂ ಮಂಟಪೋತ್ಸವ ನೆರವೇರಿತು.
ರಥೋತ್ಸವ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನದ ಬಗೆ ಬಗೆಯ ಹೂಗಳಿಂದ ಅಲಂಕೃತಗೊAಡು ಕಂಗೊಳಿಸುತ್ತಿತ್ತು. ಅ.೨೬ರ ಸೋಮವಾರ ಸಂಜೆ ೭ಕ್ಕೆ ತೆಪ್ಪೋತ್ಸವ ನೆರವೇರಿಸುವುದರೊಂದಿಗೆ ಈ ಬಾರಿಯ ಶರನ್ನವರಾತ್ರಿಯ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ.
ರಥೋತ್ಸವದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಹಾಗೂ ಬೆಟ್ಟದಲ್ಲಿ ಭಾರೀ ಪೊಲೀಸ್ ಭದ್ರತೆ ಮಾಡಲಾಗಿತ್ತು.


