
ಕೋಟೆ – ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆ
ಎಚ್ ಡಿ ಕೋಟೆ : ಸರಗೂರು ಮತ್ತು ಹೆಚ್ ಡಿ ಕೋಟೆ ಸಾರಿಗೆ ಬಸ್ ನಿಲ್ದಾಣದಿಂದ ಮೈಸೂರಿಗೆ ಹೋಗುವವರ ಮತ್ತು ಬರುವವರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಎಚ್ ಡಿ ಕೋಟೆ ಸಾರಿಗೆ ಡಿಪೋಗೆ ಮತ್ತೆ 12 ಸಾರಿಗೆ ಬಸ್ ನೀಡಲಾಗಿದ್ದು, ಸೋಮವಾರ ಸಾಂಕೇತಿಕವಾಗಿ ಎರಡು ಬಸ್ ಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಹಸಿರು ನಿಶಾನೆ ತೋರಿದರು. ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಎರಡು ಕೆಎಸ್ ಆರ್ ಟಿಸಿ ಬಸ್ ಗೆ ಚಾಲನೆ ನೀಡಿ, ಅದೇ ಬಸ್ ನಲ್ಲಿ ಗದ್ದಿಗೆ ಸರ್ಕಲ್ ವರೆಗೆ ತೆರಳಿ ಪ್ರಯಾಣಿಕರಿಗೆ ಟಿಕೆಟ್ ಕೂಡ ವಿತರಿಸಿದರು.
ಡಿಪೋ ಮ್ಯಾನೇಜರ್ ತ್ಯಾಗರಾಜ್ ಮಾತನಾಡಿ, ನಮ್ಮ ಡಿಪೋದಲ್ಲಿ 99 ಸಾರಿಗೆ ಬಸ್ ಗಳಿದ್ದು, ಪ್ರತಿದಿನ 33,500 ಕಿಲೋ ಮೀಟರ್ ಗೆ ಸಂಚಾರ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹೆಚ್ ಡಿ ಕೋಟೆ ಮತ್ತು ಸರಗೂರಿನಿಂದ ಮೈಸೂರಿಗೆ ಹೋಗುವವರ ಮತ್ತು ಬರುವವರ ಸಂಖ್ಯೆ ದುಪ್ಪಟಾಗಿದೆ. ಜೊತೆಗೆ ಗ್ರಾಮಗಳಿಗೂ ಬಸ್ ಗಳ ಸಂಚಾರ ಅವಶ್ಯಕತೆ ಇರುವುದನ್ನು ಮನಗಂಡ ಶಾಸಕ ಅನಿಲ್ ಚಿಕ್ಕಮಾದು ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ, ಹೆಚ್ಚುವರಿ 12 ಸಾರಿಗೆ ಬಸ್ ಗಳನ್ನು ಹೆಚ್ ಡಿ ಕೋಟೆ ಸಾರಿಗೆ ಡಿಪೋಗೆ ಕೊಡಿಸಿದ್ದಾರೆ. ಅವರಿಗೆ ನಾವು ಡಿಪೋ ಪರವಾಗಿ ಕೃತಜ್ಞತೆ ಹೇಳುತ್ತೇನೆ ಎಂದು ಹೇಳಿದರು.
ಪ್ರಜಾಸೇವೆ ಆಂದೋಲನ ನಡೆಯುತ್ತಿರುವ ಹಿನ್ನೆಲೆ ಸಾರಿಗೆ ಬಸ್ ಗಾಗಿ ಜನರಿಂದ ಮನವಿ ಕೇಳಿಬರುತ್ತಿದ್ದು, ಶಾಸಕರ ಸೂಚನೆ ಮೇರೆಗೆ ಕೆಲ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಿಕೊಡುತ್ತಿದ್ದೇವೆ. ನಮ್ಮಲ್ಲಿರುವ ಸಂಪನ್ಮೂಲ ಬಳಸಿಕೊಂಡು ಬಸ್ ಸಂಪರ್ಕ ಕಲ್ಪಿಸಿಕೊಡುತ್ತಿದ್ದೇವೆ. ಜೊತೆಗೆ ಮೈಸೂರಿಗೆ ಹೋಗುವ ಬಸ್ ಗಳು ಗ್ರಾಮೀಣ ಭಾಗದಲ್ಲಿ ನಿಲ್ಲಿಸುವುದಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆ, ಇದೀಗ ಹೊಸ ಬಸ್ ಗಳನ್ನೂ ಎಲ್ಲ ನಿಲ್ದಾಣಗಳಲ್ಲೂ ನಿಲ್ಲಿಸುವ ವ್ಯವಸ್ಥೆ ಮಾಡಿದ್ದೇವೆ. ಹಂತ ಹಂತವಾಗಿ ಎಲ್ಲಾ ಕಡೆಯೂ ಬಸ್ ಸೌಲಭ್ಯ ಕಲ್ಪಿಸಿಕೊಡಲಿದ್ದು, ಅಲ್ಲಿಯವರಿಗೆ ಪ್ರಯಾಣಿಕರು ಸಹಕರಿಸಬೇಕು ಎಂದು ತ್ಯಾಗರಾಜ್ ಮನವಿ ಮಾಡಿದರು.
ಈ ವೇಳೆ ತಹಸೀಲ್ದಾರ್ ಶ್ರೀನಿವಾಸ್, ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್, ಅಬಕಾರಿ ಇಲಾಖೆ ಸಬ್ ಇನ್ಸ್ಪೆಪೆಕ್ಟರ್ ಶಿವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಕೃಷಿ ಇಲಾಖೆ ಸಹಾಯಕ ಅಧಿಕಾರಿ ಪ್ರಸಾದ್, ತಾಲೂಕು ಕಾಂಗ್ರೆಸ್ ವಕ್ತಾರ ಅಶೋಕ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಜರುದ್ದೀನ್, ಕಂದೇಗಾಲ ಶಿವರಾಜ್, ಸೌಮ್ಯ ಮಂಜುನಾಥ್, ಈರೇಗೌಡ, ರಾಜುನಾಯಕ, ಭಾಗ್ಯಲಕ್ಷ್ಮಿ, ಚಾಮರಾಜು, ಬಿ.ವಿ ಬಸವರಾಜು, ಕೆಂಡಗಣಸ್ವಾಮಿ, ಆಟೋ ವೆಂಕಿ, ನಾಗರಾಜು ಭೋಗೇಶ್ವರ ಕಾಲೋನಿ, ಉಡನಾಗರಾಜು ಸೇರಿದಂತೆ ಕಾಂಗ್ರೆಸ್ ಮುಖಂಡರು, ಸಾರಿಗೆ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು