
ಮೈಸೂರು: ನಗರದ ಜೆಕೆ ಗ್ರೌಂಡ್ ಮೈದಾನದಲ್ಲಿ ನಾಡ ಹಬ್ಬ ಮೈಸೂರು ದಸರಾ 2026 ರೈತ ದಸರಾ ಉಪ ಸಮಿತಿಯ ವತಿಯಿಂದ ಭಾನವಾರ ಶ್ವಾನ ಹಾಗೂ ಮುದ್ದು ಪ್ರಾಣಿಗಳ ಪ್ರದರ್ಶನ ನಡೆಯಿತು. ಇದರಲ್ಲಿ 54 ಜಾತಿಯ 706 ಶ್ವಾನಗಳು ಹಾಗೂ 54 ಬೆಕ್ಕುಗಳು ಸೇರಿದಂತೆ ಒಟ್ಟು 760 ಪ್ರಾಣಿಗಳು ಭಾಗವಹಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದವು. ಜರ್ಮನ್ ಶೆಫರ್ಡ, ರಾಟ್ ವಿಲರ್, ಲ್ಯಾಬ್ರಡಾರ್, ಕೇನ್ಕೋರ್ಸ, ಅಮೆರಿಕನ್ ಬುಲ್ಲಿ, ಬಾಕ್ಸರ್, ಕಾಕರ್ ಸ್ಪಾ÷್ಯನಿಯಲ್, ಲ್ಹಾಸಪ್ಸಾ, ಗ್ರೇಡ್ಡೆನ್, ಪಮೆರಿಯನ್ ಹೀಗೆ ವಿವಿಧ ತಳಿಯ ಮುದ್ದು ನಾಯಿಗಳು ಎಲ್ಲರ ಕಣ್ಮನ ಸೆಳೆದವು.
ಐರಿಸ್ಗೆ ಸತತ 4ನೇ ಬಾರಿ ಪ್ರಥಮ ಬಹುಮಾನ !
ಈ ಬಾರಿಯ ದಸರಾ ಶ್ವಾನ ಪ್ರದರ್ಶನದಲ್ಲಿ ಮೈಸೂರಿನ ಸಿದ್ದಾರ್ಥ ಬಡಾವಣೆಯ ಹಿತ್ ಹರನ್ ಅವರ ಟಾಯ್ಪೂಡಲ್ ತಳಿಯ `ಐರಿಸ್’ ಶ್ವಾನವು ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದೆ.
ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ದಸರಾ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆಯುವ ಮೂಲಕ ಐರಿಸ್ ಅಪರೂಪದ ಸಾಧನೆ ಮಾಡಿದೆ.
ಯುರೋಪ್ ಮೂಲದ ಈ ಟಾಯ್ಪೂಡಲ್ ತಳಿಯ ಶ್ವಾನವನ್ನು ದೆಹಲಿಯ ಬ್ರೀಡರ್ ಮೂಲಕ ತರಿಸಿಕೊಳ್ಳಲಾಗಿದೆ. ತನ್ನ ಬುದ್ಧಿವಂತಿಕೆ, ಚುರುಕುತನ ಹಾಗೂ ಆಕರ್ಷಕ ನೋಟದಿಂದ ಟಾಯ್ಪೂಡಲ್ ತಳಿಯ ಶ್ವಾನಗಳು ಜನಪ್ರಿಯವಾಗಿವೆ. ಸತತ ನಾಲ್ಕನೇ ಬಾರಿಯೂ ಪ್ರಶಸ್ತಿ ಗೆಲ್ಲುವ ಮೂಲಕ ಐರಿಸ್ ದಸರಾ ಶ್ವಾನ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಶ್ವಾನಗಳು ಮತ್ತು ಸಾಕುಪ್ರಾಣಿಗಳು ಮನುಷ್ಯನ ಒಂಟಿತನವನ್ನು ಹೋಗಲಾಡಿಸುತ್ತವೆ ಹಾಗೂ ಇವು ಮನುಷ್ಯನಿಗೆ ಅತ್ಯಂತ ನಂಬಿಕಸ್ಥ ಪ್ರಾಣಿಗಳಾಗಿವೆ. ಪೊಲೀಸ್ ಇಲಾಖೆಯಲ್ಲಿ ಶ್ವಾನಗಳ ಸೇವೆ ಹಾಗೂ ಅವುಗಳ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ ಎಂದರು.
ಶ್ವಾನಗಳಿAದ ಕಚ್ಚಿಸಿಕೊಂಡರೆ ರೇಬಿಸ್ ನಂತರದ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆಯಿದ್ದು, ಕಚ್ಚಿದ ತಕ್ಷಣವೇ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಚುಚ್ಚುಮದ್ದುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕÀ ಡಾ. ಸಿದ್ದರಾಮು, ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಂಜೇಶ್, ಡಾ. ಪ್ರಸನ್ನ ಬಿ.ವಿ. ಪಶುವೈದ್ಯಾಧಿಕಾರಿಗಳು ಮತ್ತು ಇಲಾಖೆಯ ಇತರ ಅಧಿಕಾರಿಗಳು ಹಾಗೂ ರೈತ ದಸರಾ ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.