
ಮೈಸೂರು; ಮಾಜಿ ಸಚಿವ ಸತೀಶ್ ಜಾರಕಿ ಹೊಳಿಗೆಯವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಸ್ಥಾನವನ್ನು ನೀಡಬೇಕೆಂದು ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ ಆಗ್ರಹಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿರವರು ರಾಜ್ಯದ ಪ್ರಶ್ನಾತೀತ ನಾಯಕರು, ಆಹಿಂದ ಮತ್ತು ಶೋಷಿತ ಸಮುದಾಯಗಳ ಪರವಾಗಿ ಸುಮಾರು 30 ವರ್ಷಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿರುವ ರಾಜ್ಯದ ಏಕೈಕ ವ್ಯಕ್ತಿ. ಇವರು ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗದೆ, ಸಾಮಾಜಿಕವಾಗಿಯೂ ತಮ್ಮ ಸ್ವಂತ ಹಣದಿಂದ ಹಲವಾರು ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಿ, ವಿವಿಧ ರೀತಿಯ ತರಬೇತಿಗಳನ್ನು ನೀಡುವ ಮೂಲಕ ಹಲವಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ರಾಜ್ಯದಲ್ಲಿ ನಿರಂತರವಾಗಿ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಯಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದು, ರಾಜ್ಯದ ಆಹಿಂದ ವರ್ಗದ ಏಕೈಕ ನಾಯಕ ಸತೀಶ್ ಜಾರಕಿಹೊಳಿಯೆಂದು ಹೇಳಿದರೇ ತಪ್ಪಾಗಲಾರದು ಎಂದು ಹೇಳಿದರು.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ 15 ಮೀಸಲು ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನು ಗೆಲ್ಲುವು ಮೂಲಕ ಹಾಗೂ ಒಂದು ಸಾಮಾನ್ಯ ಕ್ಷೇತ್ರದಲ್ಲಿಯೂ ಸಹಾ ಜಯಗಳಿಸಿ ಒಟ್ಟು 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಲು ಹಾಗೂ 3 ಲೋಕಸಭಾ ಕ್ಷೇತ್ರದಲ್ಲಿ ನಾಯಕ ಸಮುದಾಯದವರು ಗೆಲ್ಲಲು ಸತೀಶ್ ಜಾರಕಿಹೊಳಿ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ. ಜೊತೆಗೆ ಬಾಗಲಕೋಟೆ, ಹಾಗೂ ಶಿಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಶ್ರಮವಹಿಸಿದ್ದಾರೆ. ಹೀಗೆ ನಿರಂತರವಾಗಿ ಶೋಷಿತ ಸಮುದಾಯಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಜಾರಕಿಹೊಳಿರವರಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೇ, ನಮ್ಮ ಸಮುದಾಯ ಇನ್ನು, ಹೆಚ್ಚಿನ ರೀತಿಯಲ್ಲಿ ಸತೀಶ್ ಜಾರಕಿಹೊಳಿರವರನ್ನು ಬೆಂಬಲಿಸಲು ಅನುಕೂಲವಾಗುತ್ತದೆ. ಹಾಗೂ ಇದು ಪಕ್ಷ ಸಂಘಟನೆಗೂ ಸಹಕಾರಿಯಾಗುತ್ತದೆ. ಆದ್ದರಿಂದ ಶೋಷಿತ ಸಮುದಾಯದ ಪರವಾಗಿರುವಂತ ಆಹಿಂದ ನಾಯಕ ಸತೀಶ್ ಜಾರಕಿಹೊಳಿರವರಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ. ಹಾಗೂ ಸದರಿ ಸಚಿವ ಸಂಪುಟದಲ್ಲಿ ನಾಯಕ ಸಮುದಾಯಕ್ಕೆ 3 ಸಚಿವರನ್ನು ಕೊಡುವ ಮೂಲಕ ಮೈಸೂರು ವಿಭಾಗದ ಏಕೈಕ ಶಾಸಕ ಅನಿಲ್ ಚಿಕ್ಕಮಾದು ಅವರಿಗೂ ಸಹಾ ಸಚಿವ ಸ್ಥಾನವನ್ನು ನೀಡುವ ಮೂಲಕ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ತಿಪ್ಪೂರು ಮಹಾದೇವ್, ವೆಂಕಟೇಶ ನಾಯಕ, ದೇವರಾಜ್ ಪಾಳೇಗಾರ್, ಪುಟ್ಟರಾಜು, ನರಸಿಂಹನಾಯಕ, ಮುತ್ತುರಾಜ್, ಜೆ.ಶಿವಣ್ಣ ಹೊಸರಾಮೇನಹಳ್ಳಿ ಉಪಸ್ಥಿತರಿದ್ದರು.