
ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಚಲಾಯಿಸಿದ ಮತ ಅಸಿಂಧು ಆಗಿಲ್ಲ. ನಾನು ಮತ ಚಲಾಯಿಸದಷ್ಟು ಅಪ್ರಬುದ್ಧನಲ್ಲ, ಈ ಬಗ್ಗೆ ಸತ್ಯ ಶೋಧನ ಸಮಿತಿಯಿಂದ ಬಹಿರಂಗವಾಗಲಿದೆ ಎಂದು ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಶನಿವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ನಾನು ಚಲಾಯಿಸಿದ ಮತ ಅಸಿಂಧು ಆಗಿದೆ ಎಂದು ಯಾರೋ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ನಾನು ಮತ ಚಲಾಯಿಸಲು ಆಗದಷ್ಟು ಅಪ್ರಬುದ್ಧನಲ್ಲ. ನಾನು ವಿವೇಚನೆಯಿಂದ ಮತ ಚಲಾಯಿಸಿದ್ದೇನೆ. ನನ್ನ ಮತ ಅಸಿಂಧು ಆಗಿದೆ ಎಂದು ಹೇಳಿದವರು ಯಾರು, ಈ ಬಗ್ಗೆ ಚುನಾವಣೆ ಆಯೋಗ ಏನಾದರೂ ತಿಳಿಸಿದೆಯಾ. ಇದು ಗೌಪ್ಯ ಮತದಾನ ಆಗಿದೆ. ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಎಲ್ಲವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಅಡ್ಡ ಮತದಾನ ನಡೆದಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದಕ್ಕೆ ಸತ್ಯಶೋಧನಾ ಸಮಿತಿ ರಚಿಸಿದೆ. ಸದ್ಯದಲ್ಲೇ ಎಲ್ಲ ಬಹಿರಂಗ ಆಗಲಿದೆ ಎಂದು ಖಾರವಾಗಿಯೇ ನುಡಿದರು.
ವಿಧಾನ ಪರಿಷತ್ ಸದಸ್ಯ ರಘು ಆರ್ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ಕುದುರೆ ವ್ಯಾಪಾರ ಮಾಡಿದೆ. ಕೆಲ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಸತ್ಯಶೋಧನಾ ಸಮಿತಿ ರಚಿಸಿದೆ. ಅಡ್ಡ ಮತದಾನ ಮಾಡಿರುವವರನ್ನು ಪತ್ತೆ ಹಚ್ಚಲಾಗುತ್ತದೆ. ನನ್ನಂತೆಯೇ ಅತಿ ಹಿಂದುಳಿದ ನಾಯಕರನ್ನು ಪಕ್ಷ ಗುರುತಿಸಿ ಸ್ಥಾನ ಕಲ್ಪಿಸಿದೆ. ಎರಡು ಬಾರಿ ಎಂಎಲ್ಸಿ ಚುನಾವಣೆಯಲ್ಲಿ ಸೋತಿದ್ದ ನನ್ನನ್ನು ಪಕ್ಷ ಈಗ ಎಂಎಲ್ಸಿ ಮಾಡಿದೆ. ಇದಕ್ಕೆ ಪಕ್ಷದ ಹಿರಿಯ ನಾಯಕರು ಕಾರಣರು. ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.