
ಮೈಸೂರು: ನಗರದ ರೈಲು ನಿಲ್ದಾಣದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಮಾಹಿತಿ ನೀಡಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧವೇ ಕೇಸ್ ದಾಖಲಿಸಿರುವುದನ್ನು ಖಂಡಿಸಿ ಮಂಗಳವಾರ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರತಿಭಟನಾಕಾರರು, ರೈಲ್ವೆ ಪೊಲೀಸರು, ಪೊಲೀಸ್ ಇಲಾಖೆ ಹಾಗೂ ಗೃಹ ಇಲಾಖೆಯ ವಿರುದ್ಧ ನಾನಾ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ವಲಸಿಗರ ವಿರುದ್ಧ ಸಮಗ್ರ ತನಿಖೆ ನಡೆಸದೆ, ಅವರನ್ನು ಹಿಡಿದುಕೊಟ್ಟ ಕಾರ್ಯಕರ್ತರ ಮೇಲೆಯೇ ಕ್ರಮ ಜರುಗಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಪೊಲೀಸರು ಗೃಹ ಸಚಿವರನ್ನು ಓಲೈಸುವ ಸಲುವಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರು ಮೈಸೂರಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದೇ ಹಿಂದೂ ಪರ ಸಂಘಟನೆ ಕಾರ್ಯಕರ್ತರು.
ಈ ಮೂಲಕ ಪೊಲೀಸರ ಕಾರ್ಯಾಚರಣೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ನೆರವು ನೀಡಿದ್ದಾರೆ. ಆದರೆ, ಪೊಲೀಸರು ಅಕ್ರಮ ವಲಸಿಗರ ಮೇಲೆ ಕ್ರಮ ತೆಗೆದುಕೊಳ್ಳದೇ ನಮ್ಮ 6 ಮಂದಿ ಕಾರ್ಯಕರ್ತರ ಮೇಲೆ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರದಲ್ಲಿ ನ್ಯಾಯಯುತ ತನಿಖೆ ಮಾಡಿ ಎಂದು ನಾನು ಹೇಳಿದ್ದೆ. ಅಕ್ರಮವಾಗಿ ನಮ್ಮ ದೇಶಕ್ಕೆ ಯಾರೇ ಬಂದರೂ ಅವರನ್ನು ತಡೆಯೋದು ಪೊಲೀಸರ ಕರ್ತವ್ಯ. ಆದರೆ, ವಲಸಿಗರ ಮೇಲೆ ಕ್ರಮ ತೆಗೆದುಕೊಳ್ಳೋದು ಬಿಟ್ಟು ನಮ್ಮವರ ಮೇಲೇ ಕ್ರಮ ಜರುಗಿಸುವುದು ಸರಿಯಲ್ಲ ಎಂದ ಅವರು, ರೈಲು ನಿಲ್ದಾಣಗಳಲ್ಲಿ ಪೊಲೀಸರು ಹೆಚ್ಚಿನ ತಪಾಸಣೆ ಮಾಡಬೇಕು. ಅಕ್ರಮ ವಲಸಿಗರು ಬರದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗಳನ್ನು ಗಮನಿಸಿದರೆ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ಪೊಲೀಸರು ಅವರ ಮಾತಿಗೆ ಕುಣಿಯುತ್ತಿದ್ದಾರೆ ಎಂದು ದೂರಿದರು.
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಅಧ್ಯಕ್ಷ ಮಹೇಶ್ ಮಾತನಾಡಿ, ಗೃಹ ಸಚಿವರ ಕುಮ್ಮಕ್ಕಿನಿಂದಲೇ ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮೂರು ಬೋಗಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಾರೆ ಎಂಬ ಮಾಹಿತಿ ಇತ್ತು. ಪೊಲೀಸರಿಗೆ ಈ ವಿಚಾರ ತಿಳಿಸಿ ಹಿಂದೂ ಕಾರ್ಯಕರ್ತರು ಸಹಕಾರಕ್ಕೆ ನಿಂತರು. ಸಹಕಾರ ಕೊಟ್ಟವರ ಮೇಲೆಯೇ ಪೊಲೀಸರು ಎಫ್ಐಆರ್ ಹಾಕಿದರು. ಆಧಾರ್ ಕಾರ್ಡ್ ಮಾತ್ರ ಪರಿಶೀಲನೆ ಮಾಡೋದು ಪೊಲೀಸರ ಕರ್ತವ್ಯ ಅಲ್ಲ. ಶಂಕಿತರ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಬೇಕಿತ್ತು. ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಆದರೆ, ನಮ್ಮ ವಿರುದ್ಧವೇ ಎಫ್ಐಆರ್ ಮಾಡಿದ್ದಾರೆ. ಇದಕ್ಕೆ ನಾವು ಹೆದರೋದಿಲ್ಲ. ಕಾನೂನಿನ ಅಡಿಯಲ್ಲೇ ಇನ್ನು ಮುಂದೆ ಅಕ್ರಮ ವಲಸಿಗರನ್ನು ಹಿಮ್ಮೆಟ್ಟಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಪ್ರತಾಪಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಎನ್.ವಿ.ಫಣೀಶ್, ವಸಂತ್ ಕುಮಾರ್, ಹೆಚ್.ಜಿ ಗಿರಿಧರ್, ಪ್ರಭಾಕರ್ ಸಿಂಧೆ, ಸೇರಿದಂತೆ ಹಲವರು ಭಾಗವಹಿಸಿದ್ದರು.