ಯುದ್ಧವಿಲ್ಲದೆ ಹೊದರೆ , ಜಗತ್ತನ್ನು ಗೆಲ್ಲುವುದಾದರೂ ಹೇಗೆ?
ಸದಾ ಯುದ್ದ ನಿರತನಾಗಿ ಇಡೀ ವಿಶ್ವವನ್ನೇ ಗೆಲ್ಲಬೇಕೆಂಬ ಕೆಟ್ಟ ಗೀಳು ಅಲೆಕ್ಸಾಂಡರ್ ನಿಗೆ. ಎಲ್ಲರನ್ನೂ ಗೆಲ್ಲುವುದರಲ್ಲೇ ಸದಾ ನಿರತನಾಗಿರುತ್ತಿದ್ದ , ಇವನಿಗೆ ಹೇಗಾದರೂ ಮಾಡಿ, ಅದರ ಗೀಳು ಬಿಡಿಸಬೇಕೆಂದು ಡಯೋನಿಜ್ ರಿಗೆ ಅನ್ನಿಸಿತು. ಹೀಗೆ ಯಾವಾಗಲೂ ಯುದ್ಧ ಮಾಡುವುದರಿಂದ ಪ್ರತಿಯೊಂದು ಜೀವಿಗೂ ಎಷ್ಟು ತೊಂದರೆಯಾಗುತ್ತದೆ ಎಂದು ಅವನಿಗೆ ಅರ್ಥ ಮಾಡಿಸಬೇಕೆಂಬುದು ಅವರ ಉದ್ದೇಶವಾಗಿತ್ತು.
ಜಗತ್ತನ್ನೆಲ್ಲಾ ಗೆದ್ದು, ಅದರಿಂದ ಏನು ಮಾಡುತ್ತೀಯಾ, ಅಲೆಕ್ಸಾಂಡರ್ ಎಂದು ಅವರು ಪದೇ ಪದೇ ಕೇಳುತ್ತಿದ್ದರೂ, ಇವರು ಹೀಗೆ ಯಾಕೆ ನನ್ನನ್ನು ಹೀಗೆ ಪ್ರಶ್ನಿಸುತ್ತಾರೆ? ಎಂದು ಅಲೆಕ್ಸಾಂಡರ್ ಒಮ್ಮೆಯೂ ಯೋಚಿಸಲಿಕ್ಕೂ ಹೋಗಲೇ ಇಲ್ಲ. ಅದರ ಬದಲಾಗಿ, ಯುದ್ಧವಿಲ್ಲದೆ ಹೊದರೆ , ಜಗತ್ತನ್ನು ಗೆಲ್ಲುವುದಾದರೂ ಹೇಗೆ? ಆದ್ದರಿಂದ ಯುದ್ಧ ಅನಿವಾರ್ಯವೆಂದು ಅವರಿಗೇ ಬುದ್ಧಿ ಹೇಳುತ್ತಿದ್ದ ಇವನು.
ಇದನ್ನು ಇಲ್ಲಿಗೆ ಹೀಗೆ ಬಿಡಬಾರದೆಂದುಕೊಂಡು, ಡಯೋನೀಜ್ , ಒಂದೂ ಸಲ , ಯುದ್ಧ ಭೂಮಿಯಲ್ಲಿ ಹೆಣಗಳ ರಾಶಿಯಲ್ಲಿ, ತಲೆ ಬುರುಡೆ ಎಲುಬುಗಳನ್ನು ಸಂಗ್ರಹಿಸ ತೊಡಗಿದರು. ಈ ಸುದ್ದಿ ಅಲೆಕ್ಸಾಂಡರ್ ನ ಕಿವಿಗೂ ಹೇಗೋ ಬಿತ್ತು. ತಾನು ಮಹಾನ್ ಸಂತ ನೆಂದು ನಂಬಿದ್ದ, ಡಯೋನಿಜ್ , ಇದೇಕೆ ಹೀಗೆ, ಇಂಥ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ, ಎಂದುಕೊಂಡು ಅವರನ್ನು ವಿಚಾರಿಸಲು ಅವರ ಬಳಿಗೆ ಬಂದ.
ಯುದ್ಧಭೂಮಿಯಲ್ಲಿ ಒಂದಿಷ್ಟು ತಲೆ ಬುರುಡೆ ಮೂಳೆಗಳನ್ನು ಎದುರಿಗಿಟ್ಟುಕೊಂಡು ಏನೋ ಯೋಚಿಸಿತ್ತಾ ಕುಳಿತಿದ್ದರು ಡಯೋನಿಜ್. ಅವರನ್ನು ಕಂಡು, ಅಲೆಕ್ಸಾಂಡರ್, ನಾನು ನಿಮ್ಮನ್ನು ಮಹಾಜ್ಞಾನಿ ಎಂದು ಪ್ರಚಾರ ಮಾಡುತ್ತಿದ್ದರೆ ,ನೀವಿಲ್ಲಿ ಹೀಗೆ ಶವದ ರಾಶಿಯ ಮುಂದೆ ಕುಳಿತು ಏನು ಮಾಡುತ್ತಿದ್ದೀರಾ? ಎಂದು ಕೇಳಿದ.
ನಾನು ಇಲ್ಲಿ ತುಂಬಾ ತಲೆಕೆಡಿಸಿಕೊಂಡು ಏನೋ ಹುಡುಕುತ್ತಲಿದ್ದೇನೆ, ನನಗೆ ಇವುಗಳಲ್ಲಿ ಸಾಮಾನ್ಯ ಸೈನಿಕನ ತಲೆ ಬುರುಡೆ ಯಾವುದು? ಸೇನಾನಿಯಾ ತಲೆ ಬುರುಡೆ ಯಾವುದು, ಹಾಗೂ ನೀನು ಸಾಯಿಸಿದ ರಾಜನ ತಲೆ ಬುರುಡೆ ಯಾವುದು ಎನ್ನುವುದೇ ಗೊತ್ತಾಗುತ್ತಿಲ್ಲ. ಇದರ ಬಗ್ಗೆ ನನಗೆ ಸ್ವಲ್ಪ ಸಹಾಯ ಮಾಡುತ್ತೀಯಾ? ಎಂದು ಕೇಳಿದರು ಸಂತರು.
ಇವರಿಗೆಲ್ಲೊ, ತಲೆಕೆಟ್ಟಿರಬೇಕು, ಅನ್ನಿಸಿತು ಅಲೆಕ್ಸಾಂಡರ್ ನಿಗೆ. ಇವರನ್ನು ತಾನು ಪರಮಜ್ಞಾನಿಗಳು ಎಂದಿಕೊಂಡಿದ್ದೆ, ಸತ್ತು ಹೋದ ನಂತರ ಎಲ್ಲರೂ ಶವವಷ್ಟೇ ಅಲ್ಲವೇ ? ಅಷ್ಟೂ ನಿಮಗೆ ತಿಳಿಯದೆ? ಎಂದು ಹೇಳಿದ.
ಆಗ ಸಂತರು ಆಶ್ಚರ್ಯ ವ್ಯಕ್ತಪಡಿಸುತ್ತಾ, ಓಹ್,ಹೌದಾ, ನನಗಿದು ಗೊತ್ತಿರಲಿಲ್ಲ, ನಾಳೆ ನೀನೂ ಕೂಡ ಸತ್ತು ಹೋದರೆ ನಿನ್ನ ತಲೆ ಬುರುಡೆಯದೂ ಇದೇ ಕಥೆ ಹಾಗಾದರೆ, ಎಂದು ಹೇಳಿದರು.
ಇವರ ಮಾತನ್ನು ಕೇಳಿ ಅಲೆಕ್ಸಾಂಡರ್ ಬೆಚ್ಚಿಬಿದ್ದು, ನೀವೇನು ಹೇಳುತ್ತಿರುವಿರಿ! ನನ್ನ ಸಾವು, ನನ್ನ ತಲೆ ಬುರುಡೆ, ಇದರ ಬಗ್ಗೆ ಮಾತನಾಡಲು ನಿಮಗೆ ಹೇಗೆ ಸಾಧ್ಯ? ಎಷ್ಟು ಧೈರ್ಯ? ನೀವೇನು ಹೇಳುತ್ತಿರುವಿರಿ ಎಂಬುದರ ಪ್ರಜ್ಞೆ ನಿಮಗಿದೆಯೇ ಎಂದು ಕೇಳಿದ.
ನಾನು ಇಲ್ಲದ್ದನೇನೂ, ಹೇಳುತ್ತಿಲ್ಲ, ಸಾವು ಎಲ್ಲರಿಗೂ ಸಮಾನವೆ, ಇಡೀ ವಿಶ್ವವನ್ನು ಗೆಲ್ಲಲು ಹೊರಟ ನೀನು, ನಿನ್ನ ಸಾವನ್ನು ಗೆಲ್ಲಲಾರೆ, ಒಂದು ದಿನ ನಿನ್ನ ತಲೆಯ ಮೇಲಿನ ಕಿರೀಟ ಇನ್ನೊಬ್ಬರ ಪಾಲಾಗುವುದಂತೂ ನಿಶ್ಚಿತ. ಅದರ ಬದಲಾಗಿ ,ಯುದ್ಧವಿಲ್ಲದೆ ಪ್ರೇಮದಿಂದ ಜಗತ್ತನ್ನು ಗೆಲ್ಲಲು ಪ್ರಯತ್ನಿಸು ಆಗ, ಈ ಮಹಾನ್ ಸಾಮ್ರಾಟನು ಬಹಳ ದಯಾಳು ಹೃದಯವಂತ, ಕರುಣಾಮಯಿ ಎಂದು ಇಡೀ ಜಗತ್ತು ನೀನಿಲ್ಲದಿದ್ದರೂ ಪ್ರೀತಿಯಿಂದ ನಿನ್ನನ್ನು ನೆನೆಯುತ್ತದೆ, ಎಂದು ಹೇಳಿದರು ಸಂತರು.
ಇವರ ಮಾತನ್ನು ಕೇಳಿ ಅಲೆಕ್ಸಾಂಡರ್ ತಲೆತಗ್ಗಿಸಿದ.
ಅಲೆಕ್ಸಾಂಡರ್, ನೀನು ನಿನ್ನ ರಾಜ್ಯವನ್ನು, ಕಾಪಾಡಿಕೊಳ್ಳಲು, ಪ್ರಜೆಗಳ ರಕ್ಷಣೆಗಾಗಿ ಮಾತ್ರ ಯುದ್ಧ ಮಾಡಬೇಕು, ಹೀಗೆ ಸಾಮ್ರಾಜ್ಯವನ್ನು ವಿಸ್ತಾರ ಮಾಡುವುದಕ್ಕಾಗಿ , ಮಹಾವೀರ, ಮಹಾ ಸಾಮ್ರಾಟನೆಂದು ಕೊಚ್ಚಿಕೊಳ್ಳಲು,ಯುದ್ಧ ಮಾಡುವ ವಿಚಾರವನ್ನು ಬಿಟ್ಟುಬಿಡು. ಮೊದಲು ನಿನ್ನ ಮನಸ್ಸನ್ನು ವಿಸ್ತಾರ ಮಾಡಿಕೋ,ಆಗ ಇಡೀ ಜಗತ್ತೇ ನಿನ್ನದಾಗುವುದು. ನೀನು ಈಗ ಗೆದ್ದ ಜಾಗವನ್ನು ನಿನ್ನ ಹಾಗೆ ಇನ್ನೊಬ್ಬ ನಿನ್ನಿಂದ ಕಸಿದುಕೊಳ್ಳಬಹುದು, ಆದರೆ ಪ್ರೀತಿಸುವ ನಿನ್ನ ಹೃದಯವನ್ನು ಮಾತ್ರ ಯಾರೂ ಕೂಡ ಕಸಿದುಕೊಳ್ಳಲಾರರು. ಎಂದು ಹೇಳಿದರು . ಗೆಲ್ಲುವುದು ಎಂದರೆ ಇನ್ನೊಬ್ಬರನ್ನು, ನೋಯಿಸಿ, ನನ್ನದಲ್ಲದ್ದರ ಮೇಲೆ, ಆಸೆ ಪಟ್ಟು, ಹಕ್ಕು ಸಾಧಿಸಿ ಅವರಿಂದ ಅದನ್ನು ಕಸಿದುಕೊಳ್ಳುವುದಲ್ಲ, ನಮ್ಮ ಒಳ್ಳೇತನವನ್ನು, ಅತ್ಯಂತ ಪ್ರೀತಿಯಿಂದ , ಅತ್ಯಂತ ಕಾಳಜಿಯಿಂದ,ಕರುಣೆಯಿಂದ , ಮಾನವೀಯತೆಯಿಂದ ಜೋಪಾನವಾಗಿ ಕಾಯ್ದು ಉಳಿಸಿಕೊಳ್ಳುವುದು ಅಲ್ಲವೇ?
ಸುವರ್ಣಾ ಮೂರ್ತಿ