
ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಮುಖ್ಯರಸ್ತೆಗಳ ಬದಿಯಲ್ಲಿನ ಸಾರ್ವಜನಿಕ ಫುಟ್ಪಾತ್ಗಳನ್ನು ಕೆಲವರು ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಅದನ್ನು ತೆರವು ಮಾಡಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.
ಪುಟ್ ಪಾತ್ ಒತ್ತುವರಿಯಿಂದಾಗಿ ಪಾದಚಾರಿಗಳು ಪ್ರಾಣಭಯದಿಂದ ಮುಖ್ಯ ರಸ್ತೆಯಲ್ಲೇ ಓಡಾಡುವಂತಾಗಿದೆ. ಇದು ನಿರಂತರ ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದೆ. “ಸಾರ್ವಜನಿಕ ರಸ್ತೆ ಮತ್ತು ಫುಟ್ಪಾತ್ಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ಅತಿಕ್ರಮಣ ಮಾಡುವಂತಿಲ್ಲ” ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಫುಟ್ಪಾತ್ಗಳನ್ನು ಮುಕ್ತವಾಗಿಡುವುದು ನಾಗರೀಕರ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಗೌರವಾನ್ವಿತ ಸುಪ್ರೀಂ ಕೋರ್ಟ್ನ ನಿಯಮಗಳ ಪ್ರಕಾರ, ಈ ಕೂಡಲೇ ಕಾರ್ಯಪ್ರವೃತ್ತರಾಗಿ ಫುಟ್ಪಾತ್ ಅತಿಕ್ರಮಣವನ್ನು ಸಂಪೂರ್ಣವಾಗಿ ಇನ್ನೆರಡು ದಿನಗಳಲ್ಲಿ ತೆರವುಗೊಳಿಸಬೇಕು. ತಪ್ಪಿದಲ್ಲಿ, ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆಗಾಗಿ ನಿಯಮಾನುಸಾರ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.