
ಮೈಸೂರು: ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸಲು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತ ನ್ಯಾಯಾಂಗ ನೆರವು ತಲುಪಿಸಲು ‘ಪ್ಯಾರಾ ಲೀಗಲ್ ವಾಲಂಟಿಯರ್’ ಯೋಜನೆಯನ್ನು ಸಕ್ರಿಯವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ತರಬೇತಿ ನೀಡಲಾಗುತ್ತಿದ್ದು, ಸ್ವಯಂ ಸೇವಕರು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈಸೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಧ್ಯಾ ರಾವ್. ಪಿ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಹಾಗೂ ಔಟ್ ಲಾಡ್ ಇಂಡಿಯಾ ಫೌಂಡೇಶನ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿ.ಕಾ.ಸೇ.ಪ್ರಾ. ಮತ್ತು ತಾ.ಕಾ.ಸೇ.ಸ. ಗಳಲ್ಲಿ ಆಯ್ಕೆಯಾಗಿರುವ ಅರೆಕಾಲಿಕ ಕಾನೂನು ಸ್ವಯಂ ಸೇವಕರುಗಳಿಗೆ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ 2009 ರಲ್ಲಿ ಜಾರಿಗೆ ತಂದ ಯೋಜನೆಯೇ ಪ್ಯಾರಾ ಲೀಗಲ್ ವಾಲಂಟಿಯರ್ ಯೋಜನೆಯಾಗಿದ್ದು, ಸಾಮಾನ್ಯ ಜನರು ಮತ್ತು ಕಾನೂನು ಸೇವಾ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ನ್ಯಾಯವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ರಚಿಸಲಾದ ಸ್ವಯಂಸೇವಕರೇ ಪ್ಯಾರಾ ಲೀಗಲ್ ವಾಲಂಟಿಯರ್ ಗಳು. ಇವರು ವಕೀಲರಲ್ಲ, ಬದಲಾಗಿ ಕಾನೂನಿನ ಪ್ರಾಥಮಿಕ ಜ್ಞಾನ ಪಡೆದು ಸಮಾಜ ಸೇವೆ ಮಾಡುವ ಮಧ್ಯವರ್ತಿಗಳು ಎಂದರು.
ನ್ಯಾಯಾಲಯಕ್ಕೆ ಹೋಗಲಾಗದ ಜನರನ್ನು ಲೋಕ್ ಅದಾಲತ್, ಮಧ್ಯಸ್ಥಿಕೆ ಕೇಂದ್ರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಂಪರ್ಕ ಕಲ್ಪಿಸುವುದು ಪ್ಯಾರಾ ಲೀಗಲ್ ವಾಲಂಟಿಯರ್ ಕೆಲಸವಾಗಿದೆ. ಯೋಜನೆಯಡಿ ಪ್ರಾರಂಭವಾದ ಈ ಸೇವೆಯು, ಕಾನೂನು ಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರ ನಡುವೆ ಮುಖ್ಯ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಬಡವರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಸಂವಿಧಾನಬದ್ಧ ಹಕ್ಕುಗಳು ಮತ್ತು ಸರಕಾರಿ ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಸ್ವಯಂ ಸೇವಕರು ಎಂದು ತಿಳಿಸಿದರು. .
ಅರ್ಹ ಫಲಾನುಭವಿಗಳಿಗೆ ಉಚಿತ ಕಾನೂನು ನೆರವು ಪಡೆಯಲು ಅರ್ಜಿ ಸಲ್ಲಿಸಲು ನೆರವಾಗುವುದು ಹಾಗೂ ಲೋಕ್ ಅದಾಲತ್ ಮತ್ತು ಮಧ್ಯಸ್ಥಿಕೆ ಕೇಂದ್ರಗಳ ಪ್ರಯೋಜನಗಳನ್ನು ತಿಳಿಸುವುದು.ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಗುರುತಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸ್ವಯಂ ಸೇವಕರು ಮಾಹಿತಿ ನೀಡುಬೇಕು ಇದರೊಂದಿಗೆ ಸ್ವಯಂ ಸೇವಕರು ಸಂತ್ರಸ್ತರಿಗೆ ವಸತಿ, ಪಿಂಚಣಿ, ಆಧಾರ್ ಹಾಗೂ ಉದ್ಯೋಗ ಖಾತರಿ ಯೋಜನೆಗಳನ್ನು ತಲುಪಿಸಲು ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆನಂದ್ ಪಿ. ಹೊಗಾಡೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಯುಕೇಶ್ ಕುಮಾರ್, ಅಪಾರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್ ಸಿ, ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್, ಅಭಿಯೋಜನಾ ಇಲಾಖೆಯ ಕಾನೂನು ಅಧಿಕಾರಿ ಬಿ.ಇ ಯೋಗೇಶ್ವರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ, ಔಟ್ ಲಾಡ್ ಫೌಂಡೇಶನ್ ತರಬೇತುದಾರರಾದ ಕು. ಶಮಾ ಡಿ, ಮತ್ತಿರರು ಉಪಸ್ಥಿತರಿದ್ದರು.