
ಮೈಸೂರು : ಪರಿಸರ ಉಳಿಸುವ ನೆಪದಲ್ಲಿ 20 ವರ್ಷಗಳಿಂದ ಯಾವುದೇ ಮೂಲ ಸೌಲಭ್ಯಗಳಿಲ್ಲದೆ, ಪ್ರಾಣಿಗಳಂತೆ ಬದುಕುತ್ತಿರುವ ನಿರ್ಗತಿಕ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದ್ದು, ನಾವು ಯಾವುದೇ ಕಾರಣಕ್ಕೂ ಇಲ್ಲಿಂದ ಕದಲುವುದಿಲ್ಲ, ನಮಗೆ ಮನೆ ಕೊಡಿ ಹೋಗುತ್ತೇವೆ, ಇಲ್ಲವೇ ವಿಷ ಕೊಡಿ ಸಾಯುತ್ತೇವೆ ಎಂದು ವೃದ್ಧರು ಅವಲತ್ತುಕೊಂಡ ಘಟನೆ ಕುರಿಮಂಡಿ ಎರಡನೇ ಪಾರ್ಕಿನಲ್ಲಿ ಗುರುವಾರ ಬೆಳಗ್ಗೆ ನಡೆಯಿತು.
ಮೈಸೂರಿನ ಪರಿಸರ ಉಳಿಸಿ ಸಮಿತಿ ಸದಸ್ಯರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಉದ್ಯಾನವನದ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಮಾಡುತ್ತಿರುವ ಜನರನ್ನು ತೆರವು ಮಾಡಿಸುವಂತೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ತಿಳಿದು ಆತಂಕಕ್ಕೆ ಒಳಗಾಗಿರುವ ಇಲ್ಲಿನ ಗುಡಿಸಲು ನಿವಾಸಿಗಳು ಪರಿಸರ ಉಳಿಸಿ ಸಮಿತಿಯವರು ಒಂದು ದಿನ ನಮ್ಮ ಹೀನಾಯ ಬದುಕನ್ನು ನೋಡಿ ನಂತರ ನಮ್ಮನ್ನು ಒಕ್ಕಲೆಬ್ಬಿಸಲಿ ಎಂದು ದೂರಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಎಂ.ರಸೂಲ್ ಮಾತನಾಡಿ, ಕೆಸರೆ ಕುರಿಮಂಡಿ ಎ ಬ್ಲಾಕ್‌ನಲ್ಲಿ ಈ ಹಿಂದೆ ಸ್ಲಂ ಬೋರ್ಡ್ ವತಿಯಿಂದ 163 ಮನೆಗಳನ್ನು ನೀಡಲಾಗಿತ್ತು, ಆ ಸಂದರ್ಭದಲ್ಲಿ 35 ಜನ ಸ್ಲಂ ನಿವಾಸಿಗಳಿಗೆ ಮನೆ ಸಿಗಲಿಲ್ಲ, ನಂತರ ಸೋನಿಯಾಗಾಂಧಿ ಬ್ಲಾಕ್ ನಿರ್ಮಿಸಲಾಯಿತು. ಆ ಸಂದರ್ಭದಲ್ಲೂ 80 ಜನರಿಗೆ ಮನೆ ಸಿಗಲಿಲ್ಲ, ಈ 115 ಜನ ನಿವೇಶನ ರಹಿತರು, ಕಳೆದ 15-20 ವರ್ಷಗಳಿಂದ ಇಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಯಾವುದೇ ಕಟ್ಟಡ ನಿರ್ಮಿಸಿಲ್ಲ, ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಹೀನಾಯವಾಗಿ ಬದುಕುತ್ತಿದ್ದಾರೆ ಎಂದರು.
ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶಿಖಾ ಅವರು ಇಲ್ಲಿನ ನಿವಾಸಿಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದರು, ಈಗ ಅವು ಶಿಥಿಲವಾಗಿದೆ, ಪಕ್ಕದಲ್ಲೇ ದೊಡ್ಡ ಮೋರಿ ಹರಿಯುತ್ತದೆ, ಈ ದುರ್ವಾಸನೆಯಲ್ಲೇ ಜನರು ಬದುಕುತ್ತಿದ್ದರು, ಸರ್ಕಾರ, ಅಧಿಕಾರಿಗಳು, ಹೋರಾಟಗಾರರು ಪರಿಸರವಾದಿಗಳಿಗೆ ಇವು ಕಾಣುವುದಿಲ್ಲವೇ? ಇವರೂ ಕೂಡ ಮನುಷ್ಯರೇ ಅಲ್ಲವೇ? ಇವರಿಗೆ ನಿವೇಶನ ಅಥವಾ ಮನೆ ಕೊಡ್ತೀವಿ ಅಲ್ಲಿಯ ತನಕ ಇಲ್ಲಿರಿ ಎಂದು ಅಂದಿನ ಜಿಲ್ಲಾಧಿಕಾರಿಗಳೇ ಇವರಿಗೆ ಮೌಖಿಕವಾಗಿ ಹೇಳಿದ್ದರ ಮೇರೆಗೆ 115 ಕುಟುಂಬಗಳು ಇಲ್ಲಿ ವಾಸವಾಗಿದ್ದಾರೆ. ಇಂತಹ ನರಕದಲ್ಲಿ ಬದುಕಲು ಯಾರಿಗೆ ತಾನೆ ಇಷ್ಟ? ಇಲ್ಲಿ ವಯೋ ವೃದ್ಧರು, ಅಂಗವಿಕಲರು, ನಿರ್ಗತಿಕರು, ವಿಧವೆಯರು ಕೂಲಿ ಮಾಡಿಕೊಂಡು ಕನಿಷ್ಠ ಬದುಕು ನಡೆಸುತ್ತಿದ್ದಾರೆ. ಇಂತಹವರನ್ನು ಏಕಾಏಕಿ ಒಕ್ಕಲೆಬ್ಬಸುವುದು ಯಾವ ನ್ಯಾಯ? ಎಂದು ಹೇಳಿದ ರಸೂಲ್ ಅವರು, ಈ ವಿಚಾರವನ್ನು ಶಾಸಕ ತನ್ವೀರ್ ಸೇಠ್ ಅವರ
ಗಮನಕ್ಕೆ ತರಲಾಗಿದೆ. ಅವರು ಇಲ್ಲಿಯ ಜನರಿಗೆ ಸೂಕ್ತ ನಿವೇಶನ ಅಥವಾ ಮನೆ ಒದಗಿಸುವ ಭರವಸೆ ನೀಡಿದ್ದಾರೆ. ಅದು ದೊರಕಿದ ನಂತರ ಇವನ್ನು ಇಲ್ಲಿಂದ ಖಾಲಿ ಮಾಡಿಸಲಿ ಎಂದರು.