Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಸಗೊಬ್ಬರ, ಡೀಸೆಲ್, ಪೆಟ್ರೋಲ್ ದರ ಏರಿಕೆ ಹಿಂತೆಗೆದುಕೊಳ್ಳಲು ಆಗ್ರಹಿಸಿ ರೈತರಿಂದ ಪ್ರತಿಭಟನೆ


ಮೈಸೂರು: ರಸಗೊಬ್ಬರ, ಡೀಸೆಲ್, ಪೆಟ್ರೋಲ್ ದರ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು, ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಮೈಸೂರು ತಾಲೂಕು ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ನಜರ್‌ಬಾದ್‌ನಲ್ಲಿರುವ ತಹಶೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ ನಾನಾ ಘೋಷಣೆಗಳನ್ನು ಕೂಗಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಮರಂಕಯ್ಯ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರ ರೈತರು ಮತ್ತು ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದು, ಬೆಲೆ ಏರಿಕೆಯಿಂದ ರೈತರು ಉಪಯೋಗಿಸುವ ಸಾಮಗ್ರಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ರೈತರ ಕಸುಬನ್ನೇ ಬಿಡಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ, ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಆದರೆ, ಚುನಾವಣೆ ಗೆದ್ದ ಮೇಲೆ ಈ ವರದಿ ಜಾರಿಯ ಬಗ್ಗೆ ಮಾತನಾಡಲಿಲ್ಲ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ, ಆ ಮಾತನ್ನು ಈಡೇರಿಸಲಿಲ್ಲ. ಕೂಡಲೇ ಏರಿಸಿರುವ ಬೆಲೆ ಇಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಏನೇನು ಬೇಡಿಕೆಗಳು: ಏರಿಸಿರುವ ಗೊಬ್ಬರದ ಬೆಲೆ ಇಳಿಕೆ ಮಾಡಬೇಕು. ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸಿ ರಿಯಾಯಿತಿ ದರದಲ್ಲಿ ರೈತರಿಗೆ ಗೊಬ್ಬರ ಒದಗಿಸಬೇಕು. ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡಿ, ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗೆ ಡಿಸೆಲ್ ಪೂರೈಸಬೇಕು. ಕೇಂದ್ರ ಸರಕಾರ ಎಂ.ಎಸ್.ಸ್ವಾಮೀನಾಥನ್ ವರದಿ ಅನ್ವಯ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು. ಬರದ ಮುನ್ಸೂಚನೆ ಇದ್ದು ಸಮರ್ಪಕವಾಗಿ ಬರವನ್ನು ಎದುರಿಸಲು ಸರಕಾರ ಸಜ್ಜಾಗಬೇಕು. ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಉಪಾಧ್ಯಕ್ಷರುಗಳಾದ ಮುದ್ದುರಾಜು, ಮಹೇಶ್, ಕಾರ್ಯಾಧ್ಯಕ್ಷ ಬಸಪ್ಪ ನಾಯಕ, ಕಾರ್ಯದರ್ಶಿ ನಾಗನಹಳ್ಳಿ ಚಂದ್ರಶೇಖರ್, ಯುವ ಘಟಕದ ಅಧ್ಯಕ್ಷ ಮಹೇಶ್, ರಾಘವೇಂದ್ರ, ಮಹಾದೇವಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.