
ಮೈಸೂರು: ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಪ್ರತಿ ದಿನ ಸೈಕ್ಲಿಂಗ್ ಅಭ್ಯಾಸ ಮಾಡಬೇಕು ನಗರ ಎಸಿಪಿ ಚಂದ್ರಶೇಖರ್ ತಿಳಿಸಿದರು.
ಬುಧವಾರ ಸರ್ಕಾರಿ ಯುವ ಹಾಸ್ಸಲ್ ಮೈ ಭಾರತ್ ಮೈಸೂರು, ಮೈಸೂರು ಅಥ್ಲೀಟ್ಸ್ ಕ್ಲಬ್, ರಾಯಲ್ ರೈಡರ್ಸ್ ಮೈಸೂರು, ಸೈಕ್ಲೋಪೀಡಿಯಾ ಮೈಸೂರು ಹಾಗೂ ಮೈಸೂರು ಸೈಕ್ಲಿಂಗ್ ತಂಡಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬೈಸಿಕಲ್ ದಿನದ ಸೈಕಲ್ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,
ದೈಹಿಕ ಆರೋಗ್ಯ, ಶಿಸ್ತು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯ ಮಹತ್ವವನ್ನು ಒತ್ತಿಹೇಳಿದರು. ಯುವಜನತೆ ಸೇರಿದಂತೆ ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ಅಳವಡಿಸಿಕೊಂಡರೆ ಪರಿಸರ ಮಾಲೀನ್ಯ ತಪ್ಪಿಸಬೇಕು, ಅದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ದೈನಿಂದನ ಕೆಲಸ, ಕಾರ್ಯಗಳಿಗೆ ಹೆಚ್ಚಾಗಿ ಸೈಕಲ್‌ಗಳನ್ನು ಬಳಸುವಂತೆ ಸಲಹೆ ನೀಡಿದರು. ಸೈಕ್ಲಿಂಗ್ ಮೂಲಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವಲ್ಲಿ ಸಂಘಟಕರ ಪ್ರಯತ್ನವನ್ನು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನೆರವಾಗುತ್ತವೆ ಎಂದು ಹೇಳಿದರು.
ಇದಕ್ಕೂ ಮುನ್ನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಶ ಬಿ. ಮಂಜುನಾಥ್ ಅವರು ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳ ಅಗತ್ಯತೆಯನ್ನು ಒತ್ತಿ ಹೇಳಿದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ ಅವರು ಪರಿಸರ ಸಂರಕ್ಷಣೆಯಲ್ಲಿ ಸೈಕ್ಲಿಂಗ್‌ನ ಮಹತ್ವವನ್ನು ವಿವರಿಸಿದರು. ಅನಿಲ್ ಅವರು ಯುವಜನರಲ್ಲಿ ಆರೋಗ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಮೈ ಭಾರತ್ ಮೈಸೂರು ಜಿಲ್ಲಾ ಯುವ ಅಧಿಕಾರಿ ಅಖಿಲ್ ಪಿ. ಅವರು, ವಿಶ್ವ ಬೈಸಿಕಲ್ ದಿನದ ಮಹತ್ವ ಹಾಗೂ ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಬೆಳೆಸುವಲ್ಲಿ ಸೈಕ್ಲಿಂಗ್‌ನ ಪಾತ್ರವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬಾಲ್ಯ ಫೌಂಡೇಶನ್ ಅಧ್ಯಕ್ಷ ಅನಿಲ್ ಉಪಸ್ಥಿತರಿದ್ದರು.
ಸೈಕಲ್ ರ‍್ಯಾಲಿಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹಾರ್ಡಿಂಗ್ ಸರ್ಕಲ್ (ಆರ್ ಗೇಟ್), ಗನ್ ಹೌಸ್ ಸರ್ಕಲ್, ಬಸವೇಶ್ವರ ಸರ್ಕಲ್, ರಾಮಸ್ವಾಮಿ ಸರ್ಕಲ್, ಅಗ್ನಿಶಾಮಕ ದಳ ವೃತ್ತ (ಸರಸ್ವತಿಪುರಂ), ಕುಕ್ಕರಹಳ್ಳಿ, ಗದ್ದಿಗೆ ರಸ್ತೆ, ಸರ್ಕಾರಿ ಯುವ ವಸತಿ ನಿಲಯ ಮಾರ್ಗವಾಗಿ ಸಂಚರಿಸಿತು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸೈಕ್ಲಿಸ್ಟ್ಗಳು ಭಾಗವಹಿಸಿ ಆರೋಗ್ಯಕರ ಜೀವನ, ರಸ್ತೆ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು.