Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಡಿಗೆ ನಾಲ್ವಡಿ ಕೃಷ್ಣರಾಜರ ಕೊಡುಗೆ ಅಪಾರವಾಗಿದೆ; ಸಿ.ಎನ್.ಮಂಜೇಗೌಡ


ಮೈಸೂರು; ಅಭಿವೃದ್ಧಿಯ ಹರಿಕಾರರಾಗಿದ್ದ ಮೈಸೂರು ಸಂಸ್ಥಾನವನ್ನಾಳಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನಾಡಿಗೆ ನೀಡಿರುವ ಕೊಡುಗೆಗಳು ಅಪಾರವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಮೈಸೂರಿನ ಅರಮನೆ ವರಹಾ ಗೇಟ್‌ನ ದಕ್ಷಿಣ ದ್ವಾರದ ಮುಂಭಾಗದಲ್ಲಿ ಕರ್ನಾಟಕ ಸೇನಾ ಪಡೆವತಿಯಿಂದ ಏರ್ಪಡಿಸಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು,
ಹಿಂದುಳಿದ ವರ್ಗದ ಜನರಿಗೆ, ದಲಿತರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ನಾಡು ಕಂಡ ಶ್ರೇಷ್ಠ ಅರಸರು, ಯದುವಂಶದ ಕುಲತಿಲಕ, ಮೈಸೂರು ವಿಶ್ವವಿದ್ಯಾಲಯದ ರೂವಾರಿ. ಏಷ್ಯಾದ ಮೊದಲ ಶಿವನ ಸಮುದ್ರ ವಿದ್ಯುತ್ ಸ್ಥಾವರದ ರೂವಾರಿ, ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದವರು. ಈ ದೇಶ ಕಂಡ ಮಹಾನ್ ಮಹಾರಾಜ. ಪ್ರಾತಃ ಸ್ಮರಣೀಯರು. ಅಭಿವೃದ್ಧಿಯ ಹರಿಕಾರರು ಎಂದು ಬಣ್ಣಿಸಿದರು.
ಪ್ರಜೆಗಳ ಹಿತರಕ್ಷಣೆಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಕೃಷ್ಣರಾಜ ಒಡೆಯರ್ ಅವರು, ರಾಜ್ಯವನ್ನು ವಿಸ್ತರಿಸದೆ, ಅಭಿವೃದ್ಧಿ ಕೆಲಸಗಳನ್ನು ಮಾಡಿ ಶಾಶ್ವತವಾಗಿ ಪ್ರಜೆಗಳ ಮನದಲಿ ಉಳಿದರು. ರಾಜ್ಯ ಸರ್ಕಾರ ಇಂತಹ ಮಹನೀಯರ ಜಯಂತಿ ಕಾರ್ಯಕ್ರಮವನ್ನು ಈಗಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದರು.
ಹಿರಿಯ ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ, ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್‌ಗೌಡ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು, ಸೇರಿಸಬೇಕು ಹಾಗೂ ಕೇಂದ್ರ ಸರ್ಕಾರ ನಾಲ್ವಡಿರವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಎಪಿಎನ್ ಪ್ರಾಪರ್ಟೀಸ್‌ನ ಅಧ್ಯಕ್ಷ ಎ ಪಿ ನಾಗೇಶ್ ಅವರು ಮೈಸೂರು ಪಾಕನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ (ಜೆಪಿ), ಜೆಡಿಎಸ್ ನಗರಾಧ್ಯಕ್ಷ ಎಸ್‌ಬಿಎಂ ಮಂಜು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ ಬಿ ಲಿಂಗರಾಜು, ಸಮಾಜ ಸೇವಕ ಶ್ರೀ ದೊರೆಸ್ವಾಮಿ ಎಂಎನ್, ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಟಿ.ಜಿ.ಆದಿಶೇಷ ಗೌಡ, ಗೋಲ್ಡನ್ ಸುರೇಶ್, ನಾಗೇಗೌಡ, ಕುಮಾರ್ ಗೌಡ, ಕೃಷ್ಣಪ್ಪ, ಪ್ರಭುಶಂಕರ, ಎಳನೀರು ರಾಮಣ್ಣ, ಸಿಂದುವಳ್ಳಿ ಶಿವಕುಮಾರ್, ನೇಹಾ, ಶೋಭಾರಾಣಿ ಗೌಡ, ಸುಜಾತಾ, ಸೌಮ್ಯ, ಇಂದಿರಾ, ಪದ್ಮಾ, ಪ್ರಭಾಕರ್, ಶಿವರಾಂ, ವಿಜಯೇಂದ್ರ, ರಾಧಾಕೃಷ್ಣ, ದರ್ಶನ್ ಗೌಡ, ಪ್ರದೀಪ್, ಗಣೇಶ್ ಪ್ರಸಾದ್, ವಿಷ್ಣು, ರವೀಶ್, ರವಿ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು