
ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ಪರಿಸರ ನಿಯಂತ್ರಣ ಮಂಡಳಿ ಕೇಂದ್ರ ಸರ್ಕಾರ ಕೂಡಲೇ ಅನುಮತಿ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.
ಮಂಗಳವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮೇಕೆದಾಟು ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಪಿಟಿಶಿಯನ್ ಹಾಕಿದ್ದಕ್ಕೆ ತಿಂಗಳಿಗೆ 170 ಟಿಎಂಸಿ ನೀರು ಬಿಟ್ಟು, ಉಳಿದ ನೀರನ್ನು ಕರ್ನಾಟಕ ರಾಜ್ಯ ಬಳಕೆ ಮಾಡಿಕೊಳ್ಳುವುದಕ್ಕೆ ಮುಕ್ತ ಅವಕಾಶ ನೀಡಿದೆ. ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿಸಿ ಪರಿಸರ ನಿಯಂತ್ರಣ ಮಂಡಳಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಅನುವ್ಮತಿಯನ್ನು ನೀಡಿದರೆ ರಾಜ್ಯ ಸರ್ಕಾರ ಕೂಡಲೇ ಯೋಜನೆಯನ್ನು ಜಾರಿ ಮಾಡುತ್ತದೆ. ಆದರೆ ರಾಜಕೀಯ ಕಾರಣಕ್ಕಾಗಿ ಕೆಲ ಸಂಸದರು ಮೇಕೆದಾಟು ಯೋಜನೆ ಜಾರಿಯನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷವನ್ನು ಮುಗಿಸುವ ಹುನ್ನಾರವನ್ನು ಕೇಂದ್ರ ಬಿಜೆಪಿ ಮಾಡುತ್ತಿದೆ. ತಮಿಳುನಾಡಿನಲ್ಲಿ ಎಐಡಿಎಂಕೆ ಮುಗಿಸಿದರು. ಒಡಿಸ್ಸಾದಲ್ಲಿ ಬಿ.ವಿ.ಪಟ್ನಾಯಕ್ ಸಹಾಯ ಪಡೆದು ಅದನ್ನು ಪೂರ್ಣವಾಗಿ ಮುಗಿಸಿದರು. ಮಹಾರಾಷ್ಟçದಲ್ಲಿ ಶಿವಸೇನೆಯನ್ನು ನಾಲ್ಕು ಭಾಗವಾಗಿಸಿದರು. ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಗೆದ್ದಿದ್ದರೂ ಮಮತಾ ಬ್ಯಾನರ್ಜಿ ಪಕ್ಷದವರನ್ನು ಒಡೆದು, ತಮ್ಮತ್ತ ಬರುವಂತೆ ಮಾಡುತ್ತಿದ್ದಾರೆ. ಜೆಡಿಎಸ್ ಅನ್ನು ಮೂರು ತಿಂಗಳಲ್ಲಿ ಪೂರ್ಣ ಮುಳುಗಿಸುವಂತಹ ಕೆಲಸ ಮಾಡುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮನೆ ಬಾಗಿಲು ತೆರೆದಿರುತ್ತದೆ ಎಂದು ಹೇಳಿದ್ದಾರೆ. ಜೆಡಿಎಸ್ ನ ಬಹುತೇಕ ಮಂದಿ ಈಗ ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ರಾಜ್ಯ ಸಭಾ ಸ್ಥಾನ ನೀಡದೇ ಜೆಡಿಎಸ್ ಗೆ ಮರ್ಮಾಘಾತ ಮಾಡಿದ್ದಾರೆ. ಇನ್ನಾದರೂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹತ್ತು ದಿನದ ಹಿಂದೆಯೇ ಕೋರ್ ಕಮಿಟಿ ಸಭೆ ನಡೆಸಿ ಎಚ್.ಡಿ.ದೇವೇಗೌಡರ ಹೆಸರು ಶಿಫಾರಸ್ಸು ಮಾಡಿದ್ದೇವೆಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಶಿಫಾರಸ್ಸು ಪಟ್ಟಿ ಎಚ್.ಡಿ.ದೇವೇಗೌಡರಿಗೆ ತೋರಿಸಿ ಅವರನ್ನು ಮುಟ್ಟಾಳರನ್ನಾಗಿ ಮಾಡುವ ಕೆಲಸ ಬಿಜೆಪಿ ಮಾಡಿತೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದ್ದು ಈ ಬಗ್ಗೆ ಅವರೇ ಉತ್ತರಿಸಬೇಕಿದೆ ಎಂದು ಹೇಳಿದರು.
ಮೂರು ತಿಂಗಳಲ್ಲಿ ಎಚ್‌ಡಿಕೆ ಮಾಜಿ ಸಚಿವರಾಗುತ್ತಾರೆ: ಕೇಂದ್ರದಲ್ಲಿ ಎಚ್.ಡಿ.ಕುಮಾರಸ್ವಾಮಿಯನ್ನು ಮಂತ್ರಿ ಮಾಡಿ ಎನೂ ಮಾಡದಂತೆ ಮಾಡಿದ್ದಾರೆ. ಎನ್‌ಡಿಎಫ್, ಎಚ್‌ಎಂಟಿ, ಭದ್ರಾವತಿ ಸ್ಟೀಲ್ ಕಂಪನಿ ಮುಚ್ಚು ಹೋಗುತ್ತಿವೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಒಂದಾದರೂ ಸಭೆ ನಡೆಸಿದ್ದೀರಾ?, ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಅಡವಿಟ್ಟಿದ್ದಾರೆ. ನೂರಕ್ಕೆ ನೂರ ರಷ್ಟು ಮೂರು ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯನ್ನು ಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವ ಕೆಲಸ ಬಿಜೆಪಿ ಮಾಡಲಿದೆ ಎಂದು ಹೇಳಿದರು. ಬಿಜೆಪಿ ನಂಬಿದರೆ ಎನೇಲ್ಲಾ ಆಗುತ್ತದೆ ಎಂಬುದಕ್ಕೆ ಇದೆಲ್ಲಾ ಉದಾಹರಣೆಯಾಗಿದೆ. ತಂದೆಗಿAತ ಸಚಿವ ಸ್ಥಾನವೇ ಮುಖ್ಯವಾಯಿತೆ ಎಂದು ಕೇಳಿದರು.
ಕೇಂದ್ರ ಬಿಜೆಪಿಗೆ ಡಿಎಂಕೆ, ಟಿಎಂಸಿಯ 20 ಎಂಪಿಗಳು ಬೆಂಬಲ ಸೂಚಿಸಿದರೆ, ರಾಜ್ಯ ರಾಜಕೀಯದ ಚಿತ್ರಣ ಬದಲಾವಣೆ ಆಗಲಿದ್ದು, ಇಬ್ಬರೂ ಕೇಂದ್ರದ ಮಂತ್ರಿ ಸ್ಥಾನ ಕಿತ್ತು ಮನೆಗೆ ಕಳುಹಿಸುತ್ತಾರೆ. ಬಿಜೆಪಿಯ ಹಿಡನ್ ಅಜೆಂಡ ಮುಂದಿನ ದಿನಗಳಾದರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಎಸ್ ಐಆರ್ 101902 ಮ್ಯಾಪಿಂಗ್ ಆಗದೆ ಇವೆ. ಇದನ್ನು ಕಡಿಮೆ ಮಾಡಬೇಕು. ಶೇ.96.36 ಮ್ಯಾಪಿಂಗ್ ಆಗಿದ್ದು, ಶೇ.99ಗೆ ತಂದು ನಿಲ್ಲಿಸಬೇಕೆಂದು ಡಿಸಿಗೆ ಮನವಿ ಮಾಡುತ್ತೇನೆಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮೈಸೂರು ನಗರ ವಕ್ತಾರ ಕೆ.ಮಹೇಶ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು ಉಪಸ್ಥಿತರಿದ್ದರು.