
ಮೈಸೂರು; ಕಾಂಗ್ರೆಸ್ ಮುಖಂಡ ಎಸ್.ಸಿ. ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಜೂನ್ 15 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದಲ್ಲಿ ನಾಯಕ ಸಮುದಾಯವು ಸುಮಾರು 9ರಿಂದ 10 ಲಕ್ಷ ಜನ ಸಂಖ್ಯೆಯಿದ್ದು, ಇಲ್ಲಿಯವರೆಗೆ ನಮ್ಮ ಸಮುದಾಯದ ಹೆಚ್ಚಿನ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದರೂ ಕೂಡ, ಇಂದಿನವರೆಗೂ ಈ ಭಾಗದಲ್ಲಿ ಯಾರನ್ನು ಕೂಡ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್.ಸಿ. ಬಸವರಾಜು ಅವರು ಮೈಸೂರು ವಿಭಾಗದಲ್ಲಿ ಸಮುದಾಯದ ಹಿರಿಯ ಮುಖಂಡರಾಗಿದ್ದು, ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಾಗಿದ್ದು, ಪಕ್ಷ ವಹಿಸಿದ್ದ ಕೆಲಸ ಕಾರ್ಯಗಳನ್ನು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿರುತ್ತಾರೆ. ಸದರಿ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಮೈಸೂರು ಭಾಗದಿಂದ ಸಮುದಾಯದ ಹಿರಿಯರಾದ ಎಸ್.ಸಿ. ಬಸವರಾಜು ಅವರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಜೂನ್ 15 ರಂದು ಬೆಳಗ್ಗೆ 11 ಗಂಟೆಗೆ ನಗರದ ನಂಜರಾಜ ಬಹದ್ದೂರ್ ಛತ್ರದ ಮುಂಭಾಗದಿAದ ಮೆರವಣಿಗೆ ಹೊರಟು ಕಾಂಗ್ರೆಸ್ ಕಚೇರಿ ತಲುಪಿ ಅಲ್ಲಿ ಮನವಿ ಪತ್ರವನ್ನು ಮೈಸೂರು ನಗರ ಜಿಲ್ಲಾಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ನಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ್ ಪಾಳೇಗಾರ್, ಮುಖಂಡರುಗಳಾದ ಮಂಜುನಾಥ್, ವೆಂಕಟೇಶ್ ನಾಯಕ್, ಸುರೇಶ್ ಕುಮಾರ ಬೀಡು, ಜೆ.ಶಿವಣ್ಣ ಹೊಸರಾಮೇನಹಳ್ಳಿ, ಮಾಜಿ ಗ್ರಾ.ಪಂ ಸದಸ್ಯ ಸಿದ್ದನಾಯಕ ಮತ್ತಿತರರು ಉಪಸ್ಥಿತರಿದ್ದರು.