
ಮೈಸೂರು; ನಗರದ ವಿಜಯ ವಿಠಲ ವಿದ್ಯಾಶಾಲೆಯಲ್ಲಿ, 2026-27ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭವು ಶಾಲಾ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಮಾರಂಭಕ್ಕೆ ರೋಟರಿ ಮೈಸೂರಿನ ಅಧ್ಯಕ್ಷ ಆರ್.ಟಿ.ಎನ್. ಎಂ. ಎನ್. ವೆಂಕಟೇಶ್ ಅವರು ಮುಖ್ಯ ಅತಿಥಿಗಳಾಗಿ ಮತ್ತು ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದರು. ರೋಟರಿ ಮೈಸೂರಿನ ಯುವ ಸೇವಾ ವಿಭಾಗದ ನಿರ್ದೇಶಕರಾದ ಆರ್.ಟಿ.ಎನ್. ಡಾ. ನಂಜರಾಜೇ ಎಸ್. ಅರಸ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ. ಪವನ್ ವಿ. ಜೋಷಿ ಅವರು ಅತಿಥಿ ಗೌರವವನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ಪವನ್ ವಿ. ಜೋಷಿ ಅವರನ್ನು ಗೌರವಿಸಲಾಯಿತು. ರೋಟರಿ ಮೈಸೂರಿನ ಸಮುದಾಯ ಸೇವಾ ನಿರ್ದೇಶಕÀ ಆರ್.ಟಿ.ಎನ್. ಜೆಸ್ವಂತ್‌ಧರ್ ಮತ್ತು ಕಾರ್ಯದರ್ಶಿ ಆರ್.ಟಿ.ಎನ್. ಸ್ಯಾಮ್ ಕಶ್ಯಪ್ ಉಪಸ್ಥಿತರಿದ್ದರು. ವಿಜಯ ವಿಠಲ ವಿದ್ಯಾಶಾಲೆಯ ಗೌರವ ಕಾರ್ಯದರ್ಶಿ ಸಿಎ ವಿಶ್ವನಾಥ ಎ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ನೂತನವಾಗಿ ಆಯ್ಕೆಯಾದ ಇಂಟರ್ಯಾಕ್ಟ್ ಕ್ಲಬ್‌ನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ವೇಳೆ ಅವರು ನಾಯಕತ್ವ, ಸೇವೆ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯ ಆದರ್ಶಗಳನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗಣ್ಯರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಜೊತೆಗೆ ಸಮುದಾಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದ ಅಂಗವಾಗಿ ಡಾ. ಪವನ್ ವಿ. ಜೋಷಿ ಅವರ ನೇತೃತ್ವದಲ್ಲಿ ಡಾ. ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು ವಿದ್ಯಾರ್ಥಿಗಳು ಸಮಗ್ರ ನೇತ್ರ ತಪಾಸಣೆಗೆ ಒಳಗಾದರು. ಹೆಚ್ಚಿನ ತಪಾಸಣೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆಯ ಮಾರ್ಗದರ್ಶನವನ್ನು ನೀಡಲಾಯಿತು.