
ಮೈಸೂರು: ಪ್ರಖ್ಯಾತ ಹಿನ್ನೆಲೆ ಗಾಯಕಿ, `ಗಾನ ಕೋಗಿಲೆ’ ಎಂದೇ ಖ್ಯಾತರಾದ ಜಾನಕಿ ಅಮ್ಮನವರ ಅಗಲಿಕೆಗೆ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ಜಾನಕಿ ಅಮ್ಮನವರ ಅಗಲಿಕೆ ನಮಗೆ ಅಪಾರ ದುಃಖವನ್ನು ಉಂಟುಮಾಡಿದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಮೈಸೂರಿಗೆ ಬಂದು ಇಲ್ಲೇ ನೆಲೆಸಿದ್ದರು. ಆಗಾಗ ಆಶ್ರಮಕ್ಕೆ ಬಂದು ಸ್ವಾಮೀಜಿಯವರ ದರ್ಶನ ಪಡೆಯುತ್ತಿದ್ದರು. ಕೆಲವೊಮ್ಮೆ ನನ್ನೊಂದಿಗೆ ಮಾತನಾಡಲು ಸಾಧ್ಯವಾಗದಿದ್ದರೂ, ಕೇವಲ ದರ್ಶನ ಪಡೆದುಕೊಂಡು ಹೋಗುತ್ತಿದ್ದರು,” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಸ್ವಾಮೀಜಿಯವರ ಕುರಿತು ಹಾಡಿದ್ದ ಜಾನಕಿ :
“ಜಾನಕಿ ಅಮ್ಮನವರು ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರು ನಿಜಕ್ಕೂ ಗಾನ ಕೋಗಿಲೆಯಾಗಿದ್ದರು. ಆಶ್ರಮ ಮತ್ತು ಸ್ವಾಮೀಜಿಯವರ ಕುರಿತಾಗಿಯೂ ಅವರು ಅನೇಕ ಭಕ್ತಿಗೀತೆಗಳನ್ನು ಹಾಡಿದ್ದು, ಅವುಗಳು ಜನಪ್ರಿಯವಾಗಿವೆ. ವಿಶೇಷವಾಗಿ ವೇಟೂರಿಯವರು ಬರೆದ ಸಂಗೀತ ಸಂಯೋಜನೆಗಳಲ್ಲಿ ಅವರು ಅದ್ಭುತವಾಗಿ ಧ್ವನಿ ನೀಡಿದ್ದಾರೆ,” ಎಂದು ಶ್ರೀಗಳು ಅವರ ಕೊಡುಗೆಯನ್ನು ಶ್ಲಾಘಿಸಿದರು.
ಕೋಗಿಲೆಗಳನ್ನು ಕಳೆದುಕೊಳ್ಳುತ್ತಿದ್ದೇವೆ:
ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ ಸ್ವಾಮೀಜಿಯವರು, “ಇತ್ತೀಚಿನ ದಿನಗಳಲ್ಲಿ ನಾವು ಇಂತಹ ದೈವಿ ಧ್ವನಿಯುಳ್ಳ ಒಂದೊAದೇ ಕೋಗಿಲೆಗಳನ್ನು ಕಳೆದುಕೊಳ್ಳುತ್ತಿರುವುದು ಮನಸ್ಸಿಗೆ ಆಘಾತವನ್ನುಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಹಾಗೂ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಬಂಧು-ಮಿತ್ರರಿಗೆ ಮತ್ತು ಅಭಿಮಾನಿಗಳಿಗೆ ನೀಡಲಿ,” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.