
ಮೈಸೂರು: ಪ್ರಸಕ್ತ ವರ್ಷದಲ್ಲಿ ಎಲ್-ನಿನೋ ಪ್ರಭಾವದಿಂದಾಗಿ ಸಾಧಾರಣಕ್ಕಿಂತ ಕಡಿಮೆ ಮಳೆ ಹಾಗೂ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದ್ದು, ತೋಟಗಾರಿಕಾ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ರೈತರಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆಗಳನ್ನು ನೀಡಿದ್ದಾರೆ.
ಬೆಳೆಗಳ ಮೇಲಾಗುವ ಪ್ರಮುಖ ಪರಿಣಾಮಗಳು: ತೇವಾಂಶದ ಅಭಾವದಿಂದ ಮಣ್ಣಿನಲ್ಲಿ ನೀರಿನ ಕೊರತೆಯುಂಟಾಗಿ ಹನಿ ನೀರಾವರಿಯ ಮೇಲಿನ ಅವಲಂಬನೆ ಹೆಚ್ಚಾಗುತ್ತದೆ ಮತ್ತು ಅಂತರ್ಜಲ ಹಾಗೂ ಜಲಾಶಯಗಳ ಸಂಗ್ರಹಣೆ ಕಡಿಮೆಯಾಗುತ್ತದೆ. ಅಧಿಕ ತಾಪಮಾನದ ಒತ್ತಡದಿಂದಾಗಿ ಬಾಷ್ಪೀಭವನ ಪ್ರಮಾಣ ಹೆಚ್ಚಿ, ಹೂ ಮತ್ತು ಹಣ್ಣುಗಳು ಉದುರುವುದು ಹಾಗೂ ಸೂರ್ಯತಾಪದ ಸುಟ್ಟ ಗಾಯಗಳು ಉಂಟಾಗುತ್ತವೆ. ಒಣ ಹಾಗೂ ಬಿಸಿಯಾದ ಹವಾಮಾನವು ಕೆಂಪು ಜೇಡ, ಥ್ರಿಪ್ಸ್, ಬಿಳಿ ನೊಣ, ಗಿಡ ಹೇನು ಮತ್ತು ಮೀಲಿಬಗ್ಗಳಂತಹ ರಸ ಹೀರುವ ಕೀಟಗಳ ಹೆಚ್ಚಳಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಬಲ ಪರಿಸ್ಥಿತಿಯಲ್ಲಿ ಬೇರುಗಳ ಚಟುವಟಿಕೆ ಕಡಿಮೆಯಾಗಿ ಕ್ಯಾಲ್ಸಿಯಂ, ಬೋರಾನ್, ಜಿಂಕ್ ಮತ್ತು ಪೊಟ್ಯಾಷಿಯಂನAತಹ ಪೋಷಕಾಂಶಗಳನ್ನು ಗಿಡಗಳು ಹೀರಿಕೊಳ್ಳಲು ಸಮಸ್ಯೆಯಾಗಿ ಹಣ್ಣಿನಲ್ಲಿ ಬಿರುಕು ಹಾಗೂ ಹೂ ತುದಿಯಲ್ಲಿ ಕೊಳೆ ಮುಂತಾದ ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತವೆ.
ಹಣ್ಣಿನ ಬೆಳೆಗಳು: ಮಾವಿನಲ್ಲಿ ಹೂಬಿಡುವಿಕೆ, ಹಣ್ಣಿನ ಉಳಿಕೆ ಪ್ರಮಾಣ, ಗಾತ್ರ ಮತ್ತು ಗುಣಮಟ್ಟ ಕಡಿಮೆಯಾಗುವುದರ ಜೊತೆಗೆ ಬೂದಿ ರೋಗದ ತೀವ್ರತೆ ಹೆಚ್ಚಾಗುತ್ತದೆ. ಬಾಳೆಯಲ್ಲಿ ಗಿಡದ ಬೆಳವಣಿಗೆ, ಗೊಂಚಲ ತೂಕ ಮತ್ತು ಹಣ್ಣುಗಳ ಭರ್ತಿಯಾಗುವಿಕೆ ಕಡಿಮೆಯಾಗಿ ಎಲೆಗಳು ಸುಡುತ್ತವೆ. ಹಾಗೂ ತೆಂಗಿನಲ್ಲಿ ಫಸಲು ಧಾರಣೆ ಕಡಿಮೆಯಾಗಿ, ಸುಸಿರೋಗ ಮತ್ತು ಕಪ್ಪು ತಲೆ ಹುಳುವಿನ ಬಾಧೆ ಹೆಚ್ಚಾಗುತ್ತದೆ.
ಈ ಎಲ್-ನಿನೊ ಪರಿಸ್ಥಿತಿಯಿಂದ ಉಂಟಾಗುವ ನಷ್ಟವನ್ನು ತಡೆಯಲು ಮತ್ತು ಬೆಳೆಗಳನ್ನು ಸಂರಕ್ಷಿಸಲು ರೈತರು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ: ತೋಟದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಣಬು, ಸೆಣಬು, ಡಯಾಂಚ, ಅಲಸಂದೆ ಅಥವಾ ಅವರೆಯಂತಹ ಹಸಿರೆಲೆ ಗೊಬ್ಬರದ ಬೆಳೆಗಳನ್ನು ವರ್ಷದಲ್ಲಿ ಎರಡು ಬಾರಿ ಬೆಳೆಯುವುದು ಸೂಕ್ತ. ತೆಂಗಿನ ತೋಟಗಳಲ್ಲಿ ರೋಗರಹಿತ ಬಿದ್ದ ಗರಿಗಳನ್ನು ಮತ್ತು ಕಾಯಿ ಸಿಪ್ಪೆಗಳನ್ನು ಮರದ ಬುಡದ ಸುತ್ತಲೂ ಮುಚ್ಚುವುದರ ಮೂಲಕ ಅಥವಾ ಎರಡು ಗಿಡಗಳ ಮಧ್ಯೆ ಕಂದಕ ಮಾಡಿ ಹಾಕುವುದರ ಮೂಲಕ ತ್ಯಾಜ್ಯ ನಿರ್ವಹಣೆ ಹಾಗೂ ತೇವಾಂಶ ಸಂರಕ್ಷಣೆ ಮಾಡಬಹುದು. ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಉಳಿಸಿಕೊಳ್ಳಲು ಬೇಸಿಗೆ ಉಳುಮೆ, ವಿ ಆಕೃತಿಯ ಕಾಲುವೆ ನಿರ್ಮಾಣ, ವೃತ್ತಾಕಾರ ಅಥವಾ ಅರ್ಧವೃತ್ತಾಕಾರದ ಬದುಗಳು ಹಾಗೂ ಇಂಗು ಗುಂಡಿಗಳನ್ನು ಮಾಡುವುದು ಮುಖ್ಯವಾಗಿದೆ.
ಮುಂಜಾಗ್ರತ ಕ್ರಮಗಳು: ನೀರಾವರಿ ನಿರ್ವಹಣೆಯಲ್ಲಿ, ಹನಿ ನೀರಾವರಿ ಪದ್ಧತಿಯನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನದ ನಂತರ ಬಳಸುವುದು ಹಾಗೂ ನೀರಿನ ಅಭಾವವಿದ್ದಾಗ ಪರ್ಯಾಯ ಸಾಲು ನೀರಾವರಿ ಪದ್ಧತಿಯನ್ನು ಅನುಸರಿಸುವುದು ಸೂಕ್ತ. ಗೊಬ್ಬರಗಳನ್ನು ರಸಾವರಿ ಮೂಲಕ ಕಂತುಗಳಲ್ಲಿ ನೀಡಬೇಕು ಹಾಗೂ ಮರಗಳ ಪಾತಿಗಳಲ್ಲಿ ಕಡ್ಡಾಯವಾಗಿ 10–15 ಅಡಿ ವ್ಯಾಸದಲ್ಲಿ ಸಾವಯವ ಹೊದಿಕೆಯನ್ನು ಅಳವಡಿಸಬೇಕು. ನೀರಾವರಿಯನ್ನು ಬೆಳೆಗಳ ನಿರ್ಣಾಯಕ ಬೆಳವಣಿಗೆಯ ಹಂತಗಳಲ್ಲಿ ನೀಡುವುದು, ಬಾಷ್ಪ ವಿಸರ್ಜನೆ ತಡೆಗಟ್ಟಲು ಕಾಯೋಲಿನ್ ನಂತಹ ವಸ್ತುಗಳನ್ನು ಬಳಸುವುದು, ಬರ ಸಹಿಷ್ಣುತೆಯುಳ್ಳ ತಳಿಗಳನ್ನು ಆಯ್ಕೆ ಮಾಡುವುದು ಹಾಗೂ ಗಿಡಗಳ ಸವರವಿಕೆ ಮೂಲಕ ನೀರಿನ ನಷ್ಟವನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ.
ವಿದ್ಯುತ್ ವ್ಯತ್ಯಯದಿಂದಾಗುವ ಸಮಸ್ಯೆಗೆ ಪರ್ಯಾಯವಾಗಿ ಸೋಲಾರ್ ಪಂಪ್ಸೆಟ್ಗಳನ್ನು ಬಳಸುವುದು, ಬಾಳೆ ಗಿಡಗಳಲ್ಲಿ ಮರಿ ಕಂದುಗಳನ್ನು ಆಗಾಗ್ಗೆ ತೆಗೆದು ಮಲ್ಚಿಂಗ್ ಮಾಡುವುದು ಮತ್ತು ಕೀಟ ಹಾಗೂ ರೋಗಗಳ ಮುನ್ಸೂಚನೆ ಪಡೆದು ಸಕಾಲದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ರೈತರು ಹೆಚ್ಚಿನ ವಿವರಗಳು ಮತ್ತು ನೆರವಿಗಾಗಿ ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಛೇರಿಗಳನ್ನು ದೂ:ಸಂಖ್ಯೆ ತೋ.ಜಂ.ನಿ. ಜಿ.ಪಂ, ಮೈಸೂರು: 0821-2422255 ಹಿ.ಸ.ತೋ.ನಿ. ಜಿ.ಪಂ, ಮೈಸೂರು: 0821-2430450 ಹೆಚ್.ಡಿ. ಕೋಟೆ: 08228-297261 ಹುಣಸೂರು: 08222-252447 ಕೆ. ಆರ್. ನಗರ: 08223-262791 | ಟಿ. ನರಸೀಪುರ: 08227-297068 ಅನ್ನು ಸಂಪರ್ಕಿಸಬುದೆAದು ತೋಟಗಾರಿಕೆ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.