
ಮೈಸೂರು: ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾದ ಎಫ್ಸಿವಿ ತಂಬಾಕು ಬೆಳೆಗಾರರಿಗೆ ಮಹತ್ವದ ಪರಿಹಾರವಾಗಿ, ಭಾರತ ಸರ್ಕಾರವು ತಂಬಾಕು ಮಂಡಳಿಯ ಮೂಲಕ ನೀಡಲಾಗುವ ಅನುದಾನ ಮತ್ತು ಬಡ್ಡಿರಹಿತ ಸಾಲದ ಮೊತ್ತವನ್ನು ಹೆಚ್ಚಿಸಿದೆ. ಈ ಮಹತ್ವದ ನಿರ್ಧಾರವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ತಂಬಾಕು ಮಂಡಳಿಯ ಮುಂದೆ ರೈತರ ಪರವಾಗಿ ನಿರಂತರವಾಗಿ ಮನವಿ ಸಲ್ಲಿಸಿದ್ದರ ಫಲವಾಗಿದೆ.
ಪ್ರಾಕೃತಿಕ ವಿಕೋಪಗಳಿಂದ ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು, ಅವರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಹೆಚ್ಚಿಸಬೇಕೆಂದು ಸಂಸದ ಯದುವೀರ್ ಅವರು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ತಂಬಾಕು ಮಂಡಳಿಯು ಅನುದಾನ ಹಾಗೂ ಬಡ್ಡಿರಹಿತ ಸಾಲದ ಮೊತ್ತವನ್ನು 50,000 ರಿಂದ 75,000ಕ್ಕೆ ಹೆಚ್ಚಿಸುವುದರೊಂದಿಗೆ, ಇತರೆ ನೆರವಿನ ವಿಭಾಗಗಳಲ್ಲಿಯೂ ಪರಿಷ್ಕöÈತ ಮಾರ್ಗಸೂಚಿಗಳಂತೆ ಆರ್ಥಿಕ ನೆರವನ್ನು ಹೆಚ್ಚಿಸಿದೆ.
ಈ ನಿರ್ಧಾರಕ್ಕೆ ಸ್ಪಂದಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ತಂಬಾಕು ಮಂಡಳಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೃತಜ್ಞತೆ ಸಲ್ಲಿಸಿದರು. ಈ ಪರಿಷ್ಕöÈತ ನೆರವು ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೊಳಗಾದ ತಂಬಾಕು ಬೆಳೆಗಾರರಿಗೆ ಸಕಾಲದಲ್ಲಿ ಆರ್ಥಿಕ ಬಲ ನೀಡುವುದರ ಜೊತೆಗೆ, ಅವರ ಜೀವನೋಪಾಯವನ್ನು ಪುನರುಜ್ಜೀವನಗೊಳಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ ತಂಬಾಕು ಬೆಳೆಗಾರರಿಗೂ ನ್ಯಾಯಸಮ್ಮತ ಬೆಂಬಲ ಬೆಲೆ ದೊರಕುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂಬAಧ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು, ಆಂಧ್ರ ಪ್ರದೇಶದ ತಂಬಾಕು ಬೆಳೆಗಾರರಿಗೆ ನೀಡಲಾಗುತ್ತಿರುವ ಪರಿಗಣನೆಯಂತೆಯೇ, ಕರ್ನಾಟಕದ ತಂಬಾಕು ಬೆಳೆಗಾರರಿಗೂ ನ್ಯಾಯಯುತ ಮತ್ತು ಲಾಭದಾಯಕ ಬೆಂಬಲ ಬೆಲೆಯನ್ನು ನಿಗದಿಪಡಿಸುವಂತೆ ಮನವಿ ಮಾಡಿದ್ದಾರೆ. ಕರ್ನಾಟಕದ ರೈತರೂ ಸಮಾನ ಮಾನ್ಯತೆ ಮತ್ತು ರಕ್ಷಣೆಗೆ ಅರ್ಹರು ಎಂಬುದನ್ನು ಒತ್ತಿಹೇಳಿದರು.
ಪರಿಷ್ಕöÈತ ಯೋಜನೆಯಡಿ ಅರ್ಹರಾಗಿರುವ ಮೈಸೂರು ಹಾಗೂ ಕೊಡಗು ಜಿಲ್ಲೆಯ ಎಲ್ಲಾ ತಂಬಾಕು ಬೆಳೆಗಾರರು ತಂಬಾಕು ಮಂಡಳಿಯ ಕಚೇರಿಗಳನ್ನು ಸಂಪರ್ಕಿಸಿ ಈ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. ರೈತರ ಹಿತಾಸಕ್ತಿ ಮತ್ತು ಜೀವನೋಪಾಯದ ರಕ್ಷಣೆಗಾಗಿ ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು