
ಮೈಸೂರು; ನೀಟ್ ಪರೀಕ್ಷೆಯ ಅಕ್ರಮದಿಂದ ಆತ್ಮಹತ್ಯೆ ಮಾಡಿಕೊಂಡು ೨೧ ವಿದ್ಯಾರ್ಥಿಗಳ ಕುಟುಂಬಕ್ಕೆ ಕೇಂದ್ರ ಸರಕಾರ ಪರಿಹಾರ ನೀಡಬೇಕು, ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ರದ್ದು ಮಾಡಬೇಕು ಎಂದು ಒತ್ತಾಯಿಸಿ, ನಗರ ಹಾಗೂ ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನೀಟ್ ಅಕ್ರಮ ಖಂಡಿಸಿ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಸರಿಯಲ್ಲ. ಅಕ್ರಮದಿಂದ ವಿದ್ಯಾರ್ಥಿ ಭವಿಷ್ಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪ್ರತಿಭಟನೆ ಹಕ್ಕು ಕಸಿದುಕೊಳ್ಳುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ ಎಂದು ಆರೋಪಿಸಿದರು.
ನೀಟ್ ಪರೀಕ್ಷೆಯ ಅಕ್ರಮ ತಡೆಯುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು , ಅಲ್ಲದೇ ಸರ್ವಾಧಿಕಾರಿ ಧೋರಣೆ ನಡೆಸಿದಕ್ಕೆ ಯುವಕರು ಪ್ರತಿಭಟನೆಯ ಮೂಲಕ ಸರಿಯಾದ ಉತ್ತರ ಕೊಟ್ಟಿದ್ದಾರೆ. ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು, ಯುವಕರ ಹೋರಾಟದ ಶಕ್ತಿ ಕೇಂದ್ರ ಸರಕಾರಕ್ಕೆ ಗೊತ್ತಾಗಿದೆ. ಕೇಂದ್ರ ಸರಕಾರ ನಡೆಸುವ ಯಾವುದೇ ಪರೀಕ್ಷೆಯನ್ನು ಗಂಭೀರವಾಗಿ ನಡೆಸಬೇಕು, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ÷್ಮಣ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್‌ನಾಥ್, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರರ್, ಜಿಲ್ಲಾ ಯುವ ಕಾಂಗ್ರಸ್ ಅಧ್ಯಕ್ಷ ಚಂದನ್ ಕುಮಾರ್, ನಗರ ಉಪಾಧ್ಯಕ್ಷ ನವೀನ್, ಆಡಳಿತ ಉಸ್ತುವಾರಿ ಫಿರೋಜ್ ಮತ್ತಿತರರು ಪಾಲ್ಗೊಂಡಿದ್ದರು.