
ಎಚ್.ಡಿ.ಕೋಟೆ; ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದ್ದು, ಭಾನುವಾರ 25 ಸಾವಿರ ಕ್ಯುಸೆಕ್ ನೀರನ್ನು ಕಪಿಲಾ ನದಿಗೆ ಹರಿಸಲಾಗುತ್ತಿದೆ.ಇದರಿಂದ ಸಮೀಪದ ಬಿದರಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸಾರ್ವಜನಿಕರು ಜಲಾಶಯದ ಮೇಲ್ಬಾಗದ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.
ಜಲಾಶಯಕ್ಕೆ ಸುಮಾರು 27 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬಂದಿದ್ದು, ಡ್ಯಾಂ ಭದ್ರತಾ ದೃಷಿಯಿಂದ 25 ಸಾವಿರಕ್ಕೂ ಅಧಿಕ ನೀರನ್ನು ಅಣೆಕಟ್ಟಿನ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆದು ಕಪಿಲಾ ನದಿಗೆ ಹರಿಯಬಿಡಲಾಗಿದೆ.
ನೀರಿನ ಬಿಡುಗಡೆ ಪ್ರಮಾಣ ಹೆಚ್ಚಾಗಿರುವುದರಿಂದ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಕೂಡ ವೇಗವಾಗಿ ಏರಿಕೆಯಾಗುತ್ತಿದ್ದು ಅಣೆಕಟ್ಟಿನ ಮುಂಭಾಗವಿರುವ ಬಿದರಹಳ್ಳಿ ಹಳೆ ಸೇತುವೆ ಸಂಪೂರ್ಣ ಮುಳಗಡೆಯಾಗಿದೆ. ಪರಿಣಾಮ, ಹೆಚ್ ಡಿ ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಮೂಲಕ, ಶಿರಮಳ್ಳಿ , ಬೀಚನಹಳ್ಳಿಯಿಂದ ಬಿದರಹಳ್ಳಿ, ಕಳಸೂರು, ಕಿತ್ತೂರು, ಕೆಂಚನಹಳ್ಳಿ, ಎನ್ ಬೇಗೂರು, ಗೆಂಡತ್ತೂರು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡಿದೆ. ಪರಿಣಾಮ ಸರಗೂರು ಮೂಲಕ ಸುಮಾರು 18 ಕಿಲೋ ಮೀಟರ್ ದೂರ ಕ್ರಮಿಸಿ ಆಯಾಯ ಕೇಂದ್ರಸ್ಥಾನಗಳಿಗೆ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಂಪರ್ಕ ಕಡಿತದಿಂದ ಪಟ್ಟಣದಲ್ಲಿ ಓದುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ವೈದ್ಯಕೀಯ ಸೇವೆಗೆ ಅಡಚಣೆಯಾಗಿದೆ.
ಬಿದರಹಳ್ಳಿ, ಎನ್. ಬೇಗೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಹೋಗಬೇಕಾದರೆ, ಸರಗೂರು ಮತ್ತು ಸಾಗರೆ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬದಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.
ನೆರೆಯ ಕೇರಳದ ವಯನಾಡು ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಾಗಿ, ಜಲಾಶಯದ ಸುರಕ್ಷತೆಯ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ, ಕಪಿಲಾ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಸುರಕ್ಷಿತ ಸ್ಥಳಕ್ಕೆ ವಂತೆ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿಗೆ ಸಮಾಧಾನ
ಕಬಿನಿಯಿಂದ ನೀರು ಹರಿಸಿರುವುದು ತಮಿಳುನಾಡಿನ ಕುರುವೈ ಬೆಳೆ ಋತುವಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಸಮಾಧಾನ ತಂದಿದೆ. ಪ್ರಸ್ತುತ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 35.774 ಟಿಎಂಸಿ ನೀರು ಸಂಗ್ರಹವಿದ್ದು, ಇದು ಜಲಾಶಯದ ಒಟ್ಟು ಸಾಮರ್ಥ್ಯದ (93.470 ಟಿಎಂಸಿ) ಶೇಕಡಾ 38.27 ರಷ್ಟಾಗಿದೆ. ಅಧಿಕಾರಿಗಳು ಜಲಾಶಯದ ಒಳಹರಿವಿನ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.