
ಮಾಜಿ ಮೇಯರ್ ನಾರಾಯಣರನ್ನು ಅಭಿನಂದಿಸಿದ ಪೌರಕಾರ್ಮಿಕರು
ಮೈಸೂರು : ಪೌರಕಾರ್ಮಿಕರ ವಿಶೇಷ ನೇಮಕಾತಿಯಡಿ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 477 ಒಳಚರಂಡಿ ಸಹಾಯಕರನ್ನು ಸರ್ಕಾರ ಕಾಯಂ ಮಾಡಿದ್ದು, ಈ ನೇಮಕಾತಿಗೆ ಹೋರಾಟ ನಡೆಸಿದ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ಮೈಸೂರಿನ ಮಾಜಿ ಮೇಯರ್ ನಾರಾಯಣ ಅವರನ್ನು ಪೌರಕಾರ್ಮಿಕರು ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿ, ತಮ್ಮ ಅಭಿಮಾನ ಸೂಚಿಸಿದ ಹೃದಯಸ್ಪರ್ಶಿ ಘಟನೆಗೆ ಮೈಸೂರಿನ ಪುರಭವನ ಸಾಕ್ಷಿಯಾಯಿತು.
ಶನಿವಾರ ಬೆಳಗ್ಗೆ ಪುರಭವನದಲ್ಲಿ ಜಮಾಯಿಸಿದ ನೂರಾರು ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಸಹಾಯಕರು, ರಾಜ್ಯ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ, ಮಾಜಿ ಮೇಯರ್ ನಾರಾಯಣ ಅವರಿಗೆ ಬೃಹತ್ ಹಾರ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಇದೇ ವೇಳೆ ಪುರಸಭೆಯಿಂದ ಹೊರಗಿನ ಆವರಣದ ತನಕ ನಾರಾಯಣ ಅವರನ್ನು ತಲೆಯ ಮೇಲೆ ಹೊತ್ತು ತಮ್ಮ ಅಭಿಮಾನ ಮೆರೆದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ನಾರಾಯಣ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿ, ಒಳಚರಂಡಿ ಸಹಾಯಕರನ್ನು ನೇರ ನೇಮಕಾತಿ ಮೂಲಕ ಕಾಯಂ ಮಾಡಲು ಶ್ರಮಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಾಯಂಮಾತಿಗೆ ಪ್ರಮುಖ ಕಾರಣಕರ್ತರು. ಅಂದಿನ ಹಣಕಾಸು ಕಾರ್ಯದರ್ಶಿ ಎಲ್.ಕೆ.ಅತೀಖ್ ಅವರು ಸಹ ನಮಗೆ ಸ್ಪಂದಿಸಿ, ಕಾಯಂಮಾತಿಗೆ ಸಹಕಾರ ನೀಡಿದ್ದಾರೆ. ಅವರನ್ನು ಸೂಕ್ತ ಸಂದರ್ಭದಲ್ಲಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.
ಪೌರಕಾರ್ಮಿಕರು ಸಂಘಟಿತರಾಗಬೇಕು. ತಮ್ಮ ತಮ್ಮಲ್ಲಿ ಒಡಕು ಮೂಡಿಸಿಕೊಳ್ಳಬಾರದು. ಕಾಯಂಮಾತಿ ಸರ್ಕಾರ ಮಾಡಿದೆ ಮಧ್ಯವರ್ತಿಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಪೌರಕಾರ್ಮಿಕರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಆರ್.ಶಿವ, ಯತಿರಾಜ್, ಪಳನಿ, ಶಂಕರ, ಲೋಕೇಶ್, ರಾಜೀವ, ಲಕ್ಷ÷್ಮಣ್, ರಾಜು ಆರ್., ಸೋಮ ಕೆ., ಮಾದೇವ ಆರ್.ಎನ್., ಕರ್ಪಸ್ವಾಮಿ, ಹನುಮೇಶ್, ಕಿಶೋರ್, ಕುಮಾರಸ್ವಾಮಿ, ಗಣೇಶ್, ಆರ್ಟಿಸ್ಟ್ ನಾಗರಾಜು ಇತರರು ಇದ್ದರು.