
ಮೈಸೂರು: ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯಿಂದ ಆ. 16ರಂದು ಮೈಸೂರಿನ ಜಗನ್ನೋಹನ ಅರಮನೆ ಸಭಾಂಗಣದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕೆ. ಕೆಂಡಗಣ್ಣ ವಿಶ್ವಕರ್ಮ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಗಳಿಸಿದ ಮೈಸೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ 230 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಈ ಮೂಲಕ, ಶೈಕ್ಷಣಿಕವಾಗಿ ಸಾಧನೆ ತೋರಲು ಇತರ ಮಕ್ಕಳಿಗೆ ಪ್ರೇರಣೆ ನೀಡುವುದು ನಮ್ಮ ಉದ್ದೇಶ’ ಎಂದು ಹೇಳಿದರು.
ಮುರಾರಿ ಸ್ವಾಮಿ ಪುಣ್ಯಕ್ಷೇತ್ರದ ಪೀಠಾಧಿಪತಿ ಕುಮಾರಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖಂಡ ರಘು ಆಚಾರ್, ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ, ಮಾಜಿ ಅಧ್ಯಕ್ಷ ಎನ್. ನಂದಕುಮಾರ್, ಶಾಸಕ ಕೆ. ಹರೀಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ರಘು ಕೌಟಿಲ್ಯ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ಶಿಲ್ಪಿ ಅರುಣ್ ಯೋಗಿರಾಜ್, ಚಲನಚಿತ್ರ ನಟಿ ಭವ್ಯಾ, ಕೆಪಿಸಿಸಿ ಸದಸ್ಯ ಎಚ್.ವಿ. ರಾಜೀವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸತೀಶ್, ಟಿ.ಎ. ಸಿದ್ದರಾಜು, ಲೋಕೇಶ್, ಸಿದ್ದೇಶ್, ಮಹಾಂತೇಶ್, ನಾಗರಾಜು, ಮಂಜು, ಕೃಷ್ಣಮೂರ್ತಿ ಹಾಗೂ ಶಿವಶಂಕರ್ ಹಾಜರಿದ್ದರು.